ಚಿಕ್ಕಮಗಳೂರು: ದಾಖಲೆ ಇಲ್ಲದೆ ಪಿಕಪ್ನಲ್ಲಿ ಸಾಗಿಸುತ್ತಿದ್ದ ೨.೩೦ ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚುನಾವಣೆ (Election) ನಿಮಿತ್ತ ಜಿಲ್ಲಾದ್ಯಂತ ಗಡಿಗಳಲ್ಲಿ ಚೆಕ್ ಪೋಸ್ಟ್ಗಳನ್ನು (Checkpost) ನಿರ್ಮಿಸಲಾಗಿದೆ. ಅದೇ ರೀತಿ ತರೀಕೆರೆ (Tarikere) ಪಟ್ಟಣದ ಪೊಲೀಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಪಿಕಪ್ನಲ್ಲಿ ನಾಲ್ಕು ಬಾಕ್ಸ್ ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಪಿಕಪ್ ವಾಹನದಲ್ಲಿ ಚಿನ್ನದ ಸರಗಳು ಹಾಗೂ ಚಿನ್ನದ ಬಿಸ್ಕತ್ಗಳು ಪತ್ತೆಯಾಗಿದೆ.
ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ೨ ಕೋಟಿ ೩೦ ಲಕ್ಷ ರೂ. ಬೆಲೆ ಬಾಳುವ ೯ ಕೆ.ಜಿ. ೩೦೦ ಗ್ರಾಂ ಚಿನ್ನವನ್ನೂ ವಶಪಡಿಸಿಕೊಂಡಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)