ಬೆಳಗಾವಿ: ಪ್ರೀತಿಸಿ ಮದುವೆಯಾದ ಜೋಡಿ ಭದ್ರತೆ ನೀಡುವಂತೆ ಎಸ್ಪಿ ಮೊರೆ ಹೋಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಂಗಳೂರು ಮೂಲದ ಯುವತಿ ಪ್ರಿಯಾಂಕಾ ಹಾಗೂ ಬೆಳಗಾವಿ ಮೂಲಕ ಯುವಕ ರೋಹಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳಾಗಿದ್ದಾರೆ. ಇಂದು ಖಾನಾಪುರದ ದೇವಸ್ಥಾನವೊಂದರಲ್ಲಿ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ನೇರ ಎಸ್ಪಿ ಕಚೇರಿ ಆಗಮಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು ಮೂಲದ ಪ್ರಿಯಾಂಕಾ ಮೂರು ದಿನಗಳ ಹಿಂದೆಯಷ್ಟೇ ಮನೆ ಬಿಟ್ಟು ಪ್ರಿಯಕರನಿಗಾಗಿ ಬೆಳಗಾವಿಗೆ ಆಗಮಿಸಿದ್ದರಂತೆ. ಸದ್ಯ ರೋಹಿತ್ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಿಯಾಂಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೇ, ಪ್ರಿಯಾಂಕಾಗೆ ಬೆಂಗಳೂರಲ್ಲಿ ಸುಮಾರು 12 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರಂತೆ. ಆಕೆಯ ಪೋಷಕರು ಚಿಕ್ಕವಯಸ್ಸಿನಲ್ಲಿರುವಾಗಲೇ ಸಾವನ್ನಪ್ಪಿದ್ದು, ಸೋದರ ಮಾವನ ಆಶ್ರಯದಲ್ಲಿ ಬೆಳೆದಿದ್ದರಂತೆ.
ಇನ್ನು, ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ಪ್ರಿಯಂಕಾ ತಂದೆ ಆಸ್ತಿ ಹೊಂದಿದ್ದು, ಪ್ರಿಯಾಂಕಾಗೆ 18 ವರ್ಷ ತುಂಬಿದ ಬಳಿಕ ಈ ಎಲ್ಲಾ ಆಸ್ತಿಗಳು ಪ್ರಿಯಂಕಾ ಹೆಸರಿಗೆ ವರ್ಗಾವಣೆಯಾಗಿದೆಯಂತೆ. ಆದರೆ ಸೋದರ ಮಾವನ ಕಿರಿಕಿರಿಗೆ ಬೇಸತ್ತು ಪ್ರಿಯಾಂಕಾ ಪ್ರಿಯಕರ ಮನೆಗೆ ಬಂದಿದ್ದರಂತೆ. ಆದರೆ ಪ್ರಿಯಾಂಕಾ-ರೋಹಿತ್ ಮದುವೆಯಾಗದಂತೆ ತಡೆಯಲು ಆಕೆಯ ಸಹೋದರ ಮಾವನ ಮಗ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮದುವೆ ಬಳಿಕ ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ ಗುಳೇದ್ ಅವರನ್ನು ಭೇಟಿಯಾಗಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಖಾನಾಪುರ ಪೊಲೀಸರಿಂದ ಸೂಕ್ತ ಭದ್ರತೆ ನೀಡುವ ಭರವಸೆಯನ್ನು ಎಸ್ಪಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಿಯಾಂಕಾ, ಇಂದು ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಬೆಂಗಳೂರಿನಲ್ಲಿ ರಕ್ಷಣೆ ಬೇಕು ಎಂದರೇ ಕಮಿಷನರ್ ಅವರನ್ನು ಭೇಟಿ ಮಾಡಲು ಹೇಳಿದ್ದಾರೆ. ಆದ್ದರಿಂದ ಅವರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ದೇನೆ. ಮನೆಯಲ್ಲಿ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು. ಅಲ್ಲಿಂದ ನಾನು ಬೆಳಗಾವಿಗೆ ಬಂದೇ, ಖಾನಾಪುರಕ್ಕೆ ಹೋಗಿ ಅಲ್ಲಿಯೂ ಪೊಲೀಸರಿಗೆ ದೂರು ನೀಡಿದ್ದೇವು ಎಂದು ತಿಳಿಸಿದ್ದಾರೆ.
ಪ್ರಿಯಾಂಕಾ ಹಾಗೂ ರೋಹಿತ್ ಗೆ ಇನ್ ಸ್ಟಾದಲ್ಲಿ ಪರಿಚಯ ಆಗಿದ್ದು, ಮದುವೆ ನಿಮಿತ್ತ ಬೆಳಗಾವಿಗೆ ಬಂದ ವೇಳೆ ಆಕೆ ಆತನನ್ನು ಮೊದಲ ಬಾರಿಗೆ ಭೇಟಿ ಆಗಿದ್ದಳಂತೆ. ರೋಹಿತ್ ಮನೆಯವರ ಅಕ್ಕರೆ ಹಾಗೂ ಯುವಕನ ಪ್ರೀತಿಗೆ ಮೆಚ್ಚಿ ಆತನನ್ನೇ ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದ್ದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.