ತಿರುವನಂತಪುರ: ಅಪ್ರಾಪ್ತ ಬಾಲಕನೋರ್ವ (Minor) ಕೇರಳ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ (Pinarayi Vijayan) ಬೆದರಿಕೆ (Threat) ಹಾಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ರಾತ್ರಿ ಕೇರಳ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಕರೆ ಮಾಡಿದಾತ 12 ವರ್ಷದ ಬಾಲಕ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಬಾಲಕನ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಾಲಕನ ಪೋಷಕರು, 7 ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗ ಮೊಬೈಲ್ನಲ್ಲಿ ಆಟವಾಡುವ ವೇಳೆ ಅಚಾತುರ್ಯವಾಗಿ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.
ಪೋಷಕರ ಹೇಳಿಕೆ ಪೊಲೀಸರಿಗೆ ಸಮಂಜಸವೆನಿಸಲಿಲ್ಲ. ಆದ್ದರಿಂದ ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಿಣರಾಯಿ ವಿಜಯನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಬಿ)
(ಪೊಲೀಸ್, ಅಗ್ನಿಶಾಮಕ ದಳ ಅಥವಾ ಇತರ ಯಾವುದೇ ಅಗತ್ಯ ಸೇವೆಯನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುವುದು ಅಥವಾ ಸುಳ್ಳು ಎಚ್ಚರಿಕೆಗಳನ್ನು ನೀಡುವುದರೊಂದಿಗೆ ವ್ಯವಹರಿಸುತ್ತದೆ) ಮತ್ತು 120 (ಒ) (ಯಾವುದೇ ಸಂವಹನ ವಿಧಾನದ ಮೂಲಕ ಯಾವುದೇ ವ್ಯಕ್ತಿಗೆ ತೊಂದರೆ ಉಂಟುಮಾಡುವ ಬಗ್ಗೆ ವ್ಯವಹರಿಸುತ್ತದೆ) ಅಡಿಯಲ್ಲಿ ಬೆದರಿಕೆ ಹಾಕಲು ಬಳಸಿದ ಮೊಬೈಲ್ ಸಂಖ್ಯೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.