ಜೈಪುರ: ಇನ್ಸ್ಟಾಗ್ರಾಂ (Instagram) ಸ್ನೇಹಿತನನ್ನು ಭೇಟಿ ಮಾಡುವ ಸಲುವಾಗಿ ಪಾಸ್ಪೋರ್ಟ್ (Passport) ಮತ್ತು ವೀಸಾ (Visa) ಇಲ್ಲದೆ ಪಾಕಿಸ್ತಾನಕ್ಕೆ (Pakistan) ತೆರಳಲು ಮುಂದಾಗಿದ್ದ 16 ವರ್ಷದ ಅಪ್ರಾಪ್ತ (Minor) ಬಾಲಕಿಯನ್ನು ಜೈಪುರ (Jaipur) ವಿಮಾನ ನಿಲ್ದಾಣದಲ್ಲಿ (Airport) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಬಾಲಕಿಯನ್ನು ಗಜಲ್ ಪರ್ವಿನ್ ಎಂದು ಗುರುತಿಸಲಾಗಿದೆ. ಈಕೆ ರಾಜಸ್ಥಾನದ ಸಿಕಾರ್ನ ಶ್ರೀಮಧೋಪುರದ ನಿವಾಸಿಯಾಗಿದ್ದು, ಪಾಕಿಸ್ತಾನಕ್ಕೆ ತೆರಳಲು ಬೇಕಾದ ಅಗತ್ಯ ದಾಖಲೆಗಳನ್ನು ಆಕೆ ಹೊಂದಿರಲಿಲ್ಲ ಎಂದು ವಿಮಾನ ನಿಲ್ದಾಣದ ಠಾಣಾಧಿಕಾರಿ ದಿಗ್ಪಾಲ್ ಸಿಂಗ್ ಹೇಳಿದ್ದಾರೆ. ತನ್ನ ಇನ್ಸ್ಟಾಗ್ರಾಂ ಸ್ನೇಹಿತನನ್ನು ಭೇಟಿ ಮಾಡಲು ಪಾಕಿಸ್ತಾನದ ಲಾಹೋರ್ಗೆ ತೆರಳಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ವಿಚಾರಣೆ ವೇಳೆ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಅವರಿಗೆ ಒಪ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಟಿಕೆಟ್ ಪಡೆಯುವ ಸಲುವಾಗಿ ಈಕೆ ಸುಳ್ಳು ಕಥೆಯೊಂದನ್ನು ಹೆಣೆದಿದ್ದು, ವಿಚಾರಣೆ ವೇಳೆ ನಿಜಾಂಶ ಹೊರಬಿದ್ದಿದೆ. ವಿಮಾನ ನಿಲ್ದಾಣಕ್ಕೆ ಇಬ್ಬರು ಹುಡುಗರೊಂದಿಗೆ ಬಂದ ಬಾಲಕಿ ತಾನು ಪಾಕಿಸ್ತಾನದ ನಿವಾಸಿಯಾಗಿದ್ದು,
ಮೂರು ವರ್ಷಗಳ ಹಿಂದೆ ಚಿಕ್ಕಮ್ಮನೊಂದಿಗೆ ಭಾರತಕ್ಕೆ ಬಂದು ಸಿಕಾರ್ನ ಶ್ರೀಮಧೋಪುರದಲ್ಲಿ ನೆಲೆಸಿದ್ದೆ. ಇದೀಗ ಆಕೆಯ ಜೊತೆ ಹೊಂದಾಣಿಕೆಯಾಗದೆ ವಾಪಸ್ ಪಾಕಿಸ್ತಾನಕ್ಕೆ ತೆರಳುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ವಿಮಾನ ನಿಲ್ದಾಣದಲ್ಲಿ ಬಾಲಕಿ ಹೈಡ್ರಾಮ ಮಾಡಿದ್ದಳು. ಆದರೆ ಆಕೆಯ ಬಳಿ ಯಾವುದೇ ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದ ಹಿನ್ನೆಲೆ ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.