ಬೆಂಗಳೂರು ;- ಪ್ರಿಯಕರನ ವಿರುದ್ಧ ಡೆತ್ ನೋಟ್ ಬರೆದಿಟ್ಟು ಮಾಡೆಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಜರುಗಿದೆ.
ವಿದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಯುವತಿ. ಜುಲೈ 21 ರಂದು ಯುವತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೈರಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಬರೆದಿಟ್ಟಿದ್ದಾಳೆ. ಈ ಸಂಗತಿ ಪ್ರಾಥಮಿಕ ತನಿಖೆ ವೇಳೆ ಕಂಡು ಬಂದ ಹಿನ್ನೆಲೆ ಅಕ್ಷಯ್ ನನ್ನ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಶ್ರೀ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಷಯ್ ಬಸವೇಶ್ವರ ನಗರವೊಂದರಲ್ಲಿ ಜಿಮ್ ಟ್ರೈನರ್ ಆಗಿದ್ದ. 2021ರಲ್ಲಿ ಫೇಸ್ಬುಕ್ ಮುಖಾಂತರ ಇಬ್ಬರ ಪರಿಚಯವಾಗಿ ಕ್ರಮೇಣ ಪ್ರೀತಿಗೆ ತಿರುಗಿತ್ತು. ವಿದ್ಯಾಶ್ರೀ ಪ್ರವೃತ್ತಿಯಲ್ಲಿ ಮಾಡೆಲಿಂಗ್ ಆಗಿದ್ದರು.
ಕಳೆದ ಎರಡು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಜೋಡಿ ಅನೋನ್ಯವಾಗಿತ್ತು. ಈ ನಡುವೆ ಅಕ್ಷಯ್ಗೆ ಹಣಕಾಸಿನ ಸಮಸ್ಯೆಯಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಯುವತಿ ಹಂತ – ಹಂತವಾಗಿ 1.60 ಲಕ್ಷ ಹಣ ಕೊಟ್ಟಿದ್ದರು. ಕಾಲ ಕ್ರಮೇಣ ನೀಡಿದ ಹಣ ಕೇಳಿದರೆ ಮನ ಬಂದಂತೆ ಯುವತಿಗೆ ಬೈಯುತ್ತಿದ್ದ. ಅಲ್ಲದೇ ಯುವತಿ ಕುಟುಂಬಸ್ಥರನ್ನು ನಿಂದಿಸುತ್ತಿದ್ದ. ಅಲ್ಲದೇ ತನ್ನನ್ನ ಕಡೆಗಣಿಸಿ ತನ್ನಿಂದ ದೂರವಾಗುತ್ತಿರುವುದಾಗಿ ಭಾವಿಸಿ ನಿನ್ನೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಯುವತಿಯು ಡೈರಿಯಲ್ಲಿ ತನ್ನ ಸಾವಿಗೆ ಅಕ್ಷಯ್ ಕಾರಣ ಎಂದು ಡೆತ್ ನೋಟ್ ಬರೆದಿದ್ದಾಳೆ ಎಂದು ಮೃತ ಯುವತಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)