ಹಾಸನ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ ಓಡಾಡಿದರೆ, ಇನ್ನೊಂದು ಕಡೆ ಗ್ರಾಮದೊಳಗೆಲ್ಲಾ ಕಾಡಾನೆಗಳ ಹಿಂಡು ಓಡಾಡುತ್ತಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕಿನಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ, ಸಂಜೆಯಾದರೆ ಸಾಕು ಗಜಪಡೆ ಗ್ರಾಮದೊಳಗೆ ಬರುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಇದರಿಂದ ಜಮೀನು, ಕಾಫಿ ತೋಟಕ್ಕೆ ತೆರಳಲು ರೈತರು ಹಾಗೂ ಕಾಫಿ ಬೆಳೆಗಾರರು ಭಯಪಡುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸುಮಾರು ಇಪ್ಪತ್ತಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಗ್ರಾಮಕ್ಕೆ ಬರುತ್ತಿರುವುದು ಅಪಾಯ ಉಂಟು ಮಾಡುತ್ತಿದ್ದು, ಭತ್ತ, ಅಡಿಕೆ, ಬಾಳೆ, ಕಾಫಿ ಬೆಳೆಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಗಳು ಸ್ಥಳಕ್ಕೆ ಮೊಕ್ಕಾಂ ಹೂಡಿದ್ದಾರೆ. ಮೈಕ್ ಮೂಲಕ ಪ್ರಕಟಣೆ ನೀಡುತ್ತಾ ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡುತ್ತಿದ್ದಾರೆ.