ಇದೀಗ ಮಕ್ಕಳಿಗೆ ಬೇಸಿಗೆ ರಜೆಯ ಕಾಲ. ಮಕ್ಕಳು ಯಾವಾಗಲೂ ಮನೆಯಲ್ಲೇ ಇರುವಾಗ ರುಚಿರುಚಿಯಾದ ಅಡುಗೆಗಳಿಗೆ ಅಥವಾ ತಿನಿಸುಗಳಿಗಾಗಿ ಹಠ ಮಾಡುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಹೊಸ ಹೊಸ ಅಡುಗೆಗಳನ್ನು ಮಾಡಿ ಮಕ್ಕಳನ್ನು ತೃಪ್ತಿಪಡಿಸುವುದು ಪೋಷಕರಿಗಂತೂ ಒಂದು ರೀತಿಯ ಸವಾಲು. ನಾವಿಂದು ತಳಿಸುತ್ತಿರುವ ರೆಸಿಪಿಯನ್ನು ಮಕ್ಕಳು ಇಷ್ಟಪಟ್ಟುತಂತಾರೆ. ಹಾಗಾದ್ರೆ ಇಂದಿನ ರೆಸಿಪಿ ಕಾರ್ನ್ ಚೀಸ್ ಸ್ಯಾಂಡ್ವಿಚ್ (Corn Cheese Sandwich) ಆಗಿದೆ, ಇದನ್ನು ಕೇವಲ ಮಕ್ಕಳೇ ಏಕೆ? ಮನೆಯ ಎಲ್ಲಾ ಸದಸ್ಯರಿಗೂ ಮಾಡಿ ಉಣ ಬಡಿಸಿ. ಎಲ್ಲರೂ ಇದನ್ನು ಖಂಡಿತಾ ಇಷ್ಟಪಡುತ್ತಾರೆ. ಹಾಗಿದ್ದರೆ ಕಾರ್ನ್ ಚೀಸ್ ಸ್ಯಾಂಡ್ವಿಚ್ ಮಾಡೋದು ಹೇಗೆಂದು ನೋಡೋಣ.
ಬೇಕಾಗುವ ಪದಾರ್ಥಗಳು:
ಬ್ರೆಡ್ ಸ್ಲೈಸ್ – 6
ಪುದೀನಾ ಚಟ್ನಿ – ಅಗತ್ಯಕ್ಕೆ ತಕ್ಕಂತೆ
ಬೆಣ್ಣೆ – ಅಗತ್ಯಕ್ಕೆ ತಕ್ಕಂತೆ
ಸ್ಲೈಸ್ ಚೀಸ್ – 6
ಬೇಯಿಸಿದ ಸ್ವೀಟ್ ಕಾರ್ನ್ – ಮುಕ್ಕಾಲು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – 2-3 ಟೀಸ್ಪೂನ್
ಟೊಮೆಟೊ ಕೆಚಪ್ – 1-2 ಟೀಸ್ಪೂನ್
ತುರಿದ ಚೀಸ್ – ಅಗತ್ಯಕ್ಕೆ ತಕ್ಕಂತೆ (ಕ್ರೀಮ್ ಚೀಸ್, ಮೆಯೋನೀಸ್, ಸ್ಯಾಂಡ್ವಿಚ್ ಸ್ಪ್ರೆಡ್, ಬಳಸಬಹುದು)
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ನಲ್ಲಿ ಬೇಯಿಸಿ ತಣ್ಣಗಾಗಿಸಿದ ಸ್ವೀಟ್ ಕಾರ್ನ್ ತೆಗೆದುಕೊಳ್ಳಿ. ಅದಕ್ಕೆ ಕ್ಯಾಪ್ಸಿಕಮ್ ಹಾಗೂ ಈರುಳ್ಳಿ ಹಾಕಿ ಮಿಶ್ರಣ ಮಾಡಿ.
* ಅದಕ್ಕೆ ತುರಿದ ಚೀಸ್, ಟೊಮೆಟೊ ಕೆಚಪ್, ಕರಿ ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಸ್ಟಫಿಂಗ್ ಅನ್ನು ಪಕ್ಕಕ್ಕಿಡಿ.
* ಈಗ ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು, ಅದರ ಒಂದು ಬದಿಯಲ್ಲಿ ಒಂದೊಂದು ಟೀಸ್ಪೂನ್ನಷ್ಟು ಪುದೀನಾ ಚಟ್ನಿಯನ್ನು ಚೆನ್ನಾಗಿ ಹರಡಿಕೊಳ್ಳಿ.
* ಈಗ 3 ಬ್ರೆಡ್ಗಳನ್ನು ಪಕ್ಕಕ್ಕಿರಿಸಿ, ಉಳಿದ 3 ಬ್ರೆಡ್ಗಳ ಮೇಲೆ ಒಂದೊಂದೇ ಸ್ಲೈಸ್ ಚೀಸ್ ಅನ್ನು ಇರಿಸಿ.
* ಈಗ ತಯಾರಿಸಿಟ್ಟಿರುವ ಸ್ಟಫಿಂಗ್ ಮಿಶ್ರಣವನ್ನು ಒಂದೆರಡು ಟೀಸ್ಪೂನ್ಗಳಷ್ಟು ಬ್ರೆಡ್ ಸ್ಲೈಸ್ಗಳ ಮೇಲೆ ಹರಡಿ.
* ಅವುಗಳ ಮೇಲೆ ಉಳಿದ ಸ್ಲೈಸ್ ಚೀಸ್ಗಳನ್ನಿರಿಸಿ, ಪಕ್ಕಕ್ಕಿಟ್ಟಿದ್ದ ಬ್ರೆಡ್ಗಳನ್ನು ಅವುಗಳ ಮೇಲಿಸಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಬೆಣ್ಣೆ ಹಾಕಿ, ಅವುಗಳ ಮೇಲೆ ಸ್ಯಾಂಡ್ವಿಚ್ಗಳನ್ನು ಇರಿಸಿ ಎರಡೂ ಬದಿ ರೋಸ್ಟ್ ಮಾಡಿಕೊಳ್ಳಿ.
* ಸ್ಯಾಂಡ್ವಿಚ್ಗಳು ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅವುಗಳನ್ನು ತವಾದಿಂದ ತೆಗೆದು ಚಾಕುವಿನ ಸಹಾಯದಿಂದ ಅರ್ಧಕ್ಕೆ ಕತ್ತರಿಸಿ.
* ಇದೀಗ ಕಾರ್ನ್ ಚೀಸ್ ಸ್ಯಾಂಡ್ವಿಚ್ ತಯಾರಾಗಿದ್ದು, ಟೊಮೆಟೊ ಕೆಚಪ್ನೊಂದಿಗೆ ಸವಿಯಲು ಮಕ್ಕಳಿಗೆ ನೀಡಿ