ಮಂಡ್ಯ :- ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಜಿಲ್ಲಾಡಳಿತ ಹೊಸ ಪ್ರಯತ್ನ ಮಾಡಿದ್ದು, ಸಾಂಪ್ರಾದಾಯಿಕ ಮತಗಟ್ಟೆ ಸಿಂಗಾರಗೊಂಡು ಆಕರ್ಷಿಸುತ್ತಿದೆ.
ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ (ಭಾಗದ ಸಂಖ್ಯೆ 57) ಸಾಂಪ್ರಾದಾಯಿಕ ಮತಗಟ್ಟೆಯಾಗಿದ್ದು, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಗೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಸಾಂಪ್ರದಾಯಿಕ ಮತಗಟ್ಟೆಯಾಗಿ ಸಜ್ಜುಗೊಂಡಿದೆ ಮತಗಟ್ಟೆಯ ಮುಂದೆ ತಳಿರು ತೋರಣ ಬಾಳೆ ಕಂದುಗಳಿಂದ ಕೂಡಿದ ಹಸಿರು ಚಪ್ಪರವನ್ನು ಹಾಕಿ ಹೂವಿನಿಂದ ಸಿಂಗಾರ ಮಾಡಲಾಗಿದೆ. ಮತಗಟ್ಟೆಯ ಒಳಗೆ ಮತ್ತು ಹೊರಗೆ ಜನಪದ ಕಲೆಗಳು, ಬಣ್ಣ ಬಣ್ಣದ ಚಿತ್ತಾರ, ವಿದ್ಯುತ್ ದೀಪಾಲಂಕಾರದಿಂದ ಮತಗಟ್ಟೆ ಜಗಮಗಿಸುತ್ತಿದೆ.
ಇನ್ನು ಮತಗಟ್ಟೆಯ ಚಲನ ವಲನದ ಬಗ್ಗೆ ಮೇಲಾಧಿಕಾರಿಗಳು ಮತಗಟ್ಟೆಯನ್ನು ವೀಕ್ಷಿಸಲು ಅನುವಾಗುವಂತೆ ಆನ್ ಲೈನ್ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯುವಂತೆ ಮುತುವರ್ಜಿ ವಹಿಸಲಾಗಿದೆ.
ಚುನಾವಣೆ ಆಯೋಗದ ನಿರ್ದೇಶನದಂತೆ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದ್ದು, ಹೆಮ್ಮನಹಳ್ಳಿ ಗ್ರಾಮದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಮತದಾನಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಇರುತ್ತದೆ. ಮತದಾರರು ನಿರ್ಭೀತಿಯಿಂದ ಬಂದು ಮತದಾನ ಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೀಲಾವತಿ ಮನವಿ ಮಾಡಿದರು.
ವರದಿ : ಗಿರೀಶ್ ರಾಜ್ ಮಂಡ್ಯ