ಕೊರೊನಾ ವೈರಸ್ ಜಮಾನಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲೇ ಕೋವಿಡ್ ವೈರಾಣುವಿನ ಹೊಸ ತಳಿಗಳು ಅಬ್ಬರಿಸುತ್ತಿವೆ. 2023ರ ಜುಲೈನಲ್ಲಿ ಪತ್ತೆಯಾಗಿದ್ದ ಕೋವಿಡ್ನ ಹೊಸ ತಳಿಯೊಂದು ಇದೀಗ ತನ್ನ ಪ್ರಸರಣ ಹೆಚ್ಚಿಸಿಕೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಇಜಿ.5 ಎಂಬ ಈ ಕೊರೊನಾ ವೈರಸ್ ತಳಿ ಯುರೋಪ್ ಖಂಡದಲ್ಲಿ ವ್ಯಾಪಕವಾಗಿ ಹರಡುತ್ತಿದೆ. 2023ರ ವರ್ಷಾರಂಭದಲ್ಲಿ ಈ ವೈರಾಣು ಪತ್ತೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಈ ವೈರಸ್ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿತ್ತು. ಇದೀಗ ಈ ವೈರಾಣು ವಿಶ್ವಾದ್ಯಂತ ಹರಡುತ್ತಿದೆ.
ಇಜಿ.5 ವೈರಾಣು ಕೋವಿಡ್ನ ಓಮಿಕ್ರಾನ್ ತಳಿಯ ಉಪ ತಳಿ ಆಗಿದೆ. ವಿಶ್ವಾದ್ಯಂತ ಕಂಡು ಬರುವ ಕೋವಿಡ್ ವೈರಾಣುವಿನ ವಂಶವಾಹಿ ಜೊತೆ ಹೋಲಿಕೆ ಕಂಡು ಬಂದಿದೆ. ಈ ವೈರಾಣುವಿಗೆ ಎರಿಸ್ ಎಂದು ಹೆಸರಿಡಲಾಗಿದೆ. ಈ ವೈರಸ್ ಬಹುಬೇಗ ರೂಪಾಂತರಿ ಆಗುವ ಗುಣವನ್ನು ಹೊಂದಿದೆ.
ಜುಲೈ 2023ರಲ್ಲಿ ಪತ್ತೆಯಾದ ಎರಿಸ್ ವೈರಾಣು, ಇದೀಗ ಬ್ರಿಟನ್ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತಿರುವ ಎರಡನೇ ಅತಿ ದೊಡ್ಡ ವೈರಾಣು ಎಂದು ಗುರ್ತಿಸಲಾಗಿದೆ. ಇದೇ ವೈರಾಣು ಯುರೋಪ್ ಮಾತ್ರವಲ್ಲ, ಏಷ್ಯಾ, ಉತ್ತರ ಅಮೆರಿಕ ಹಾಗೂ ಜಪಾನ್ನಲ್ಲೂ ಕಂಡು ಬರುತ್ತಿದೆ. ಈ ಮೂಲಕ ಜಪಾನ್ ದೇಶದಲ್ಲಿ 9ನೇ ಕೋವಿಡ್ ಅಲೆಯ ಆತಂಕ ಕೂಡಾ ಸೃಷ್ಟಿಯಾಗಿದೆ.
ಬೇರೆ ಕೋವಿಡ್ ವೈರಾಣುವಿಗೆ ಹೋಲಿಕೆ ಮಾಡಿದರೆ, ಎರಿಸ್ ವೈರಾಣು ಶೇ. 20ಕ್ಕಿಂತಾ ಹೆಚ್ಚು ರೂಪಾಂತರಿಯಾಗುವ ಗುಣ ಹೊಂದಿದೆ. ಈ ವೈರಾಣುವಿನ ಇಜಿ.5.1 ರೂಪಾಂತರಿ ಕೂಡಾ ಸೃಷ್ಟಿಯಾಗಿದ್ದು, ಇದರ ಮೇಲೂ ನಿಗಾ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.