ನವದೆಹಲಿ: ಅಸ್ಸಾಂ ರಾಜಕಾರಣಿಯೊಬ್ಬರು ನೋಟುಗಳನ್ನೇ ಹಾಸಿಗೆ ಮಾಡಿಕೊಂಡು ಅದರ ಮೇಲೆ ಮಲಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಅಸ್ಸಾಂನ ಉದಲಗಿರಿ ಜಿಲ್ಲೆಯ ಭೈರಗುರಿಯಲ್ಲಿ ಗ್ರಾಮ ಸಭೆ ಅಭಿವೃದ್ಧಿ ಸಮಿತಿಯ (VCDC) ಅಧ್ಯಕ್ಷ ಬೆಂಜಮಿನ್ ಬಾಸುಮತರಿ (Benjamin Basumatary) 500 ರೂ. ನೋಟಿನಲ್ಲಿ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೋಡೋಲ್ಯಾಂಡ್ನ ನಾಯಕ ಬೆಂಜಮಿನ್ ಬಾಸುಮತರಿ ಮೇಲೆ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಮತ್ತು ನರೇಗಾ ಯೋಜನೆಯಲ್ಲಿ ಬಡ ಫಲಾನುಭವಿಗಳಿಂದ ಲಂಚ ಪಡೆದ ಆರೋಪ ಇದೆ.
ಫೋಟೋಗೆ ಸ್ಪಷ್ಟನೆ:
ಫೋಟೋ ನೋಡಿ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL) ಪಕ್ಷ ಸ್ಪಷ್ಟನೆ ನೀಡಿದೆ. ಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೋ ಈ ವ್ಯಕ್ತಿಗೂ ಪಕ್ಷಕ್ಕೂ ಈಗ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಬೆಂಜಮಿನ್ ಬಾಸುಮತರಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 2024ರ ಜನವರಿ 10 ರಂದು ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲದೇ 2024ರ ಫೆಬ್ರವರಿ 10ನೇ ರಂದು VCDC ಅಧ್ಯಕ್ಷ ಸ್ಥಾನದಿಂದ ಅವರನ್ನು ತೆಗೆಯಲಾಗಿದೆ. ಅವರ ಕೃತ್ಯಗಳಿಗೆ ಅವರೇ ಹೊಣೆ ಎಂದು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ ಬಸುಮತರಿ ಅವರು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರು ಈ ಫೋಟೋವನ್ನು ತೆಗೆದಿದ್ದಾರೆ ಮತ್ತು ನಂತರ ಈ ಫೋಟೋವನ್ನು ಇಟ್ಟುಕೊಂಡು ಅವರನ್ನು ಬ್ಲ್ಯಾಕ್ಮೇಲ್ ಮಾಡಲಾಗಿತ್ತು. ಫೋಟೋದಲ್ಲಿರುವ ಹಣ ಬೆಂಜಮಿನ್ ಬಸುಮತರಿಯ ಸಹೋದರಿಯದ್ದಾಗಿತ್ತು ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.