ಮುಂಬೈ: ಒಂದೂವರೆ ವರ್ಷದ ಅಂಬೆಗಾಲಿಡುವ ಮಗುವನ್ನು ಕುದಿಯುವ ನೀರಿದ್ದ ಬಕೆಟ್ನಲ್ಲಿ ಮುಳುಗಿಸಿ ಕೊಂದ ಆರೋಪಿಯನ್ನು ಪುಣೆ (Pune) ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಕ್ರಮ್ ಕೋಲೇಕಾರ್ ಎಂದು ಗುರುತಿಸಲಾಗಿದೆ. ಈತ ಮಗುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ (Illegal Relation) ಹೊಂದಿದ್ದ ಎನ್ನಲಾಗಿದೆ. ಕಿರಣ ಎಂಬಾಕೆ ಮೃತ ಮಗುವಿನ ತಾಯಿ. ವಿಕ್ರಮ್, ಕಿರಣಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ತನ್ನನ್ನು ನಿರಾಕರಿಸಿದ ಕೋಪಕ್ಕೆ ಆಕೆಯ ಮಗುವನ್ನು ಕೊಂದಿದ್ದಾನೆ ಎಂದು ವರದಿಗಳು ತಿಳಿಸಿವೆ.
ಮಹಾರಾಷ್ಟ್ರದ (Maharashtra) ಪಿಂಪ್ರಿ ಚಿಂಚ್ವಾಡ್ನಲ್ಲಿ (Pimpri-Chinchwad) ಈ ಘಟನೆ ನಡೆದಿದ್ದು, ಏಪ್ರಿಲ್ 6ರಂದು ವಿಕ್ರಮ್ ಒಂದೂವರೆ ವರ್ಷದ ಮಗುವನ್ನು ಕುದಿಯುತ್ತಿದ್ದ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ. ಈ ದುಷ್ಕೃತ್ಯವನ್ನು ಮಹಿಳೆಯೊಬ್ಬರು ನೋಡಿದ್ದರಾದರೂ ಭಯಗೊಂಡ ಕಾರಣ ಈ ವಿಷಯವನ್ನು ಯಾರಿಗೂ ಹೇಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಶಿಂಗಾರೆ ತಿಳಿಸಿದ್ದಾರೆ. ಇವರಿಬ್ಬರ ಪ್ರೇಮದಾಟಕ್ಕೆ ಏನೂ ಅರಿಯದ ಮುದ್ದು ಕಂದಮ್ಮ ಬಲಿಯಾಗಿದೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದ್ದಾರೆ