ಇಂಫಾಲ್: ಅಸ್ಸಾಂ ರೈಫಲ್ಸ್ನ ಸೈನಿಕನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಮಣಿಪುರದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಯೋಧರಿಗೆ ಗಾಯಗಳಾಗಿದ್ದು, ಅವರನ್ನು ಚುರಾಚಂದ್ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಆರ್ ಬೆಟಾಲಿಯನ್ ಆವರಣದಲ್ಲಿ ಈ ಘಟನೆ ನಡೆದಿದೆ. ಗುಂಡು ಹಾರಿಸಿದ್ದು ಕಲಹ ಪೀಡಿತ ಮಣಿಪುರದ ಚುರಾಚಂದ್ಪುರ ಮೂಲದ ಯೋಧ ಎಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸೇನೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಇದೊಂದು ದುರದೃಷ್ಟಕರ ಘಟನೆಯಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ವಿಚಾರವಾಗಿ ಯೋಧರು ಯಾವುದೇ ಸಂಬಂಧವನ್ನು ಹೊಂದಿರಬಾರದು. ಎಲ್ಲಾ ಅಸ್ಸಾಂ ರೈಫಲ್ಸ್ನ ಸಿಬ್ಬಂದಿ ಮಣಿಪುರದ ವಿವಿಧ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿಬ್ಬಂದಿ ಒಟ್ಟಿಗೆ ಉಳಿದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ಮಣಿಪುರದಲ್ಲಿ ಕಳೆದ ಮೇ ತಿಂಗಳಿನಿಂದ ಮೇಥಿ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಹಿಂಸಾಚಾರದಲ್ಲಿ ಕನಿಷ್ಠ 207 ಇಲ್ಲಿಯವರೆಗೆ ಸಾವಿಗೀಡಾಗಿದ್ದಾರೆ. ಅಲ್ಲದೇ ಸುಮಾರು 50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.