ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ಇಂದು ಮತ್ತು ನಾಳೆ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದಲ್ಲಿ ಈ ಪೂಜೆ ನಡೆಯುತ್ತಿದೆ. ಹಿರಿಯ ನಟಿ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಮೊದಲಾದವರು ದೀಪ ಬೆಳಗಿ ಪೂಜೆಗೆ ಚಾಲನೆ ನೀಡಿದ್ದಾರೆ.
ರಾಕ್ಲೈನ್ ವೆಂಕಟೇಶ್ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದ್ದದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆಯ ಸಕಲ ಸಿದ್ದತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಗಣಪತಿ ಹೋಮದಿಂದ ಪೂಜೆ ಶುರುವಾಗಿದ್ದು, ಅಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಲಿದೆ. 8 ಜನರ ವಿಶೇಷ ಪುರೋಹಿತರ ತಂಡ ಆಗಮಿಸಿದೆ. ಬೆಳಿಗ್ಗೆ 8 ಗಂಟೆಯಿಂದ ಪೂಜೆ ಆರಂಭ ಆಗಿದೆ. ಕನ್ನಡ ಚಿತ್ರರಂಗದ ತಂತ್ರಜ್ಞರು, ಕಲಾವಿದರು ಸೇರಿ 600 ಮಂದಿ ಇದರಲ್ಲಿ ಭಾಗಿ ಆಗಲಿದ್ದಾರೆ.
ಕೊವಿಡ್ ಪೂರ್ಣಗೊಂಡ ನಂತರ ಕನ್ನಡ ಚಿತ್ರರಂಗ ಮೊದಲಿಗಿಂತ ಮಂಕಾಗಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ. ಹೀಗಾಗಿ, ಈ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
ಕಲಾವಿದರ ಸಂಘದಲ್ಲಿ ಹೋಮ ಹವನ ಮಾಡಲಾಗುವುದು ಎಂಬ ಸುದ್ದಿ ಕೇಳಿ ಬರ್ತಿದ್ದಂತೆ ಹಲವು ಊಹಾ ಪೋಹಗಳು ಶುರುವಾಗಿದೆಲ ಈ ಪೂಜೆಯನ್ನ ಪರಪ್ಪನ ಅಗ್ರಹಾರದ ನಿವಾಸಿಯಾಗಿರುವ ದರ್ಶನ್ ಅವರಿಗಾಗಿ ಮಾಡ್ತಿರುವ ಪೂಜೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದ್ರೀಗ ಈ ಎಲ್ಲ ಆರೋಪಗಳಿಗೆಲ್ಲ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕ್ಲಾರಿಟಿ ಕೊಟ್ಟಿದ್ದಾರೆ.
ಚಿತ್ರರಂಗದ ಏಳಿಗೆಗೋಸ್ಕರ, ನಾವು ಹೋಮ, ಪೂಜೆ ಮಾಡಬೇಕು ಎಂದುಕೊಂಡಿದ್ದೇವೆ. ಈ ಬಗ್ಗೆ ಈಗಾಗಲೇ ಪ್ಲಾನ್ ಮಾಡಿಕೊಳ್ಳಲಾಗಿದೆ. ದರ್ಶನ್ಗಾಗಿ ಪೂಜೆ ಮಾಡಬೇಕು ಅಂದರೆ 100 ದೇವಾಲಯದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಪೂಜೆ ಮಾಡಬೇಕೆಂದು ನನಗೇನೂ ಇಲ್ಲ. ದರ್ಶನ್ಗೋಸ್ಕರ ಪೂಜೆ ಮಾಡಲಾಗುತ್ತಿದೆ ಎಂದು ಅನ್ಕೋಂಡರೆ ದಯವಿಟ್ಟು ಕ್ಷಮಿಸಿ. ಇದು ಅವರಿಗಾಗಿ ಅಲ್ಲ, ಚಿತ್ರರಂಗದ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.
ಮೊದಲಿಗೆ ಗಣಪತಿ ಹೋಮ, ಮೃತ್ಯಂಜಯ ಹೋಮ, ಸರ್ಪ ಶಾಂತಿ, ಮುಂತಾದ ಹೋಮಗಳ ಮಂತ್ರಗಳ ಪಠಣ ಇರಲಿದೆ ಅನ್ನೋ ಮಾಹಿತಿ ಇದೆ. ಕನ್ನಡ ಚಿತ್ರರಂಗದಲ್ಲಿ ನಿರ್ವಿಘ್ನವಾಗಿ ಕೆಲಸಗಳು ಆಗಲಿ ಅಂತ ಪೂಜೆ ಮಾಡಲಾಗ್ತಿದೆ. ಈ ಶುಭ ಕಾರ್ಯಕ್ಕೆ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿ ಹಲವು ನಟ ನಟಿಯರಿಗೆ ಭಾಗಿ ಆಗಲಿದ್ದಾರೆ.