ಮಹಾರಾಷ್ಟ್ರ: ವಿಡಿಯೋ ಕಾಲ್ನಲ್ಲಿ ಶಿಕ್ಷಕಿಯನ್ನು ಬೆತ್ತಲಾಗುವಂತೆ ಪ್ರೇರೇಪಿಸಿದ ಯುವಕನೊಬ್ಬ ಅದೇ ವಿಡಿಯೋ ಮುಂದಿಟ್ಟುಕೊಂಡು ಸಾವಿರಾರು ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ. ಪುಣೆಯ ಹದಪ್ಸರ್ ಪೊಲೀಸ್ ಠಾಣೆಯಲ್ಲಿ 36 ವರ್ಷ ವಯಸ್ಸಿನ ಶಿಕ್ಷಕಿ 26 ವರ್ಷ ವಯಸ್ಸಿನ ವಿದ್ಯಾರ್ಥಿ ಮೇಲೆ ಈ ಆರೋಪ ಮಾಡಿದ್ದಾರೆ. ತಾನು ಹಣ ಕೊಡದೇ ಇದ್ದರೆ ತನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ವಿದ್ಯಾರ್ಥಿ ಬೆದರಿಕೆ ಹಾಕಿದ್ದ ಎಂದೂ ಶಿಕ್ಷಕಿ ಆರೋಪ ಮಾಡಿದ್ದಾರೆ.
ತನಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಒಂದರ ಕ್ಲಿಪ್ ಕಳಿಸಿದ ವಿದ್ಯಾರ್ಥಿ, ಹಣ ಕೊಡದೇ ಇದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದ ಎಂದು ಶಿಕ್ಷಕಿಯು ಪೊಲೀಸರಿಗೆ ದೂರು ನೀಡಿದ್ಧಾರೆ.
ಶಿಕ್ಷಕಿ ಪಾಠ ಮಾಡುತ್ತಿದ್ದ ಎಂಜಿನಿಯರಿಂಗ್ ಕಾಲೇಜ್ನಲ್ಲಿಯೇ ವಿದ್ಯಾರ್ಥಿ ಕೂಡಾ ವ್ಯಾಸಂಗ ಮಾಡುತ್ತಿದ್ದಾನೆ. ಮಾರ್ಚ್ 2020 ರಿಂದ ಜೂನ್ 2023ರವರೆಗೆ ಈ ಘಟನಾವಳಿಗಳು ನಡೆದಿವೆ ಎಂದು ತನಿಖೆ ನಡೆಸುತ್ತಿರುವ ಹಿರಿಯ ಇನ್ಸ್ಪೆಕ್ಟರ್ ಅರವಿಂದ ಗೋಖಲೆ ಅವರು ವಿವರಿಸಿದ್ದಾರೆ.
ಪುಣೆ ನಗರದಲ್ಲಿ ಇರುವ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿ ದೂರುದಾರ ಮಹಿಳೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಿಕ್ಷಕಿಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕೌಶಲ್ಯಗಳ ಕುರಿತಾಗಿ ಪಾಠ ಮಾಡುತ್ತಾರೆ. 2000ನೇ ಇಸ್ವಿಯಿಂದ ಈ ಶಿಕ್ಷಕಿ ಇಲ್ಲಿ ಪಾಠ ಮಾಡುತ್ತಿದ್ದಾರೆ. 2020ರಲ್ಲಿ ಶಿಕ್ಷಕಿಯು ಬಿಹಾರ ರಾಜಧಾನಿ ಪಟ್ನಾ ಮೂಲದ ತಮ್ಮ ಕಾಲೇಜಿನ ವಿದ್ಯಾರ್ಥಿ ಜೊತೆ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
2021ರಲ್ಲಿ ಈ ವಿದ್ಯಾರ್ಥಿಯು ಶಿಕ್ಷಕಿಗೆ ಮೆಸೇಜ್ ಮಾಡುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರೂ ಸಂಪರ್ಕದಲ್ಲಿದ್ದರು. ಪರಸ್ಪರ ಆತ್ಮೀಯ ಮೆಸೇಜ್ಗಳನ್ನು ಇಬ್ಬರೂ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದಾದ ಬಳಿಕ ವಿದ್ಯಾರ್ಥಿಯು ಒಂದು ಬಾರಿ ತನಗೆ ಸಾಮಾಜಿಕ ಜಾಲತಾಣ ಒಂದರಿಂದ ಕರೆ ಮಾಡಿ ಬೆದರಿಕೆ ಹಾಕಿದ ಎಂದು ದೂರುದಾರ ಶಿಕ್ಷಕಿ ತಿಳಿಸಿದ್ದಾರೆ. ನಿನ್ನ ಮಾನ ಕಳೆಯುತ್ತೇನೆ ಎಂದು ಬೆದರಿಕೆ ಹಾಕಿದ ವಿದ್ಯಾರ್ಥಿ, ಎರಡರಿಂದ ಮೂರು ಬಾರಿ ವಿಡಿಯೋ ಕಾಲ್ನಲ್ಲಿ ನಾನು ಬೆತ್ತಲಾಗುವಂತೆ ಮಾಡಿ ಅದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಎಂದು ಆರೋಪಿಸಿದ್ದಾರೆ.