ಬ್ಲೂ ವೇಲ್ ಚಾಲೆಂಜ್ ಆನ್ಲೈನ್ ಆಟಕ್ಕೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮಾರ್ಚ್ 8 ರಂದು ಶವವಾಗಿ ಪತ್ತೆಯಾಗಿದ್ದಾನೆ. ಬ್ರಿಸ್ಟಲ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿಯ ವಕ್ತಾರ ಗ್ರೆಗ್ ಮಿಲಿಯೊಟ್, ಇದು ಆತ್ಮಹತ್ಯೆ ಎಂದು ಹೇಳಿದ್ದು, ತನಿಖೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿ ಆನ್ಲೈನ್ ಆಟ ಬ್ಲೂವೇಲ್ಗೆ ದಾಸನಾಗಿದ್ದ ಎನ್ನಲಾಗಿದೆ. ಆಟದ ಭಾಗವಾಗಿ ವಿದ್ಯಾರ್ಥಿ 2 ನಿಮಿಷಗಳ ಕಾಲ ಉಸಿರನ್ನು ಬಿಗಿಹಿಡಿದುಕೊಂಡಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಗೇಮ್ನ್ನು ನಿಷೇಧಿಸಲು ಭಾರತ ಸರ್ಕಾರ ಮುಂದಾಗಿತ್ತು. ಬ್ಲೂ ವೇಲ್ ಗೇಮ್ (ಆತ್ಮಹತ್ಯೆ ಆಟ) ಆತ್ಮಹತ್ಯೆಗೆ ಪ್ರಚೋದನೆಯಾಗಿದೆ ಎಂದು ಐಟಿ ಸಚಿವಾಲಯವು 2017 ರಲ್ಲಿ ತಿಳಿಸಿತ್ತು.