ಲಕ್ನೋ: ಉಡುಪಿ ಕಾಲೇಜಿನ (Udupi College) ಲೇಡಿಸ್ ಟಾಯ್ಲೆಟ್ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಅದೇ ರೀತಿ ಉತ್ತರ ಪ್ರದೇಶದಲ್ಲೂ (Uttar Pradesh) ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. ತನ್ನ ಹಾಸ್ಟೆಲ್ ರೂಮೇಟ್ಸ್ಗಳ (Hostel Inmates) ಅಶ್ಲೀಲ ವೀಡಿಯೋ ಮತ್ತು ಫೋಟೋಗಳನ್ನ ಸೆರೆ ಹಿಡಿದು ತನ್ನ ಸೀನಿಯರ್ ಹುಡುಗನಿಗೆ ಕಳಿಸುತ್ತಿದ್ದ ವಿದ್ಯಾರ್ಥಿನಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿನಿ (UP College Girl) ಮಂತಾಶಾ ಕಾಝ್ಮಿ ಆರೋಪಿ ಆಗಿದ್ದಾಳೆ. ಈಕೆ ತನ್ನ ಹಾಸ್ಟೆಲ್ ರೂಮೇಟ್ಸ್ಗಳ ಅಶ್ಲೀಲ ವೀಡಿಯೋ ಸೆರೆ ಹಿಡಿದು ಸೀನಿಯರ್ ವಿದ್ಯಾರ್ಥಿ ಮೊಹಮ್ಮದ್ ಅಮೀರ್ ಎಂಬಾತನಿಗೆ ಕಳುಹಿಸುತ್ತಿದ್ದಳು. ಈತ ಫೋಟೋ ಬಳಸಿಕೊಂಡು ಅವರನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದ ಎಂದು ಆರೋಪಿಸಲಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ಆಗಸ್ಟ್ 7ರಂದು ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಕಾಲೇಜು ಆಡಳಿತ ಮಂಡಳಿ ವಿಚಾರಣೆ ಮಾಡಿ ಆರೋಪ ದೃಢಪಡಿಸಿದೆ. ಅಲ್ಲದೇ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಳಾಗಿದ್ದು, ಆಯಾ ವರ್ಷಗಳಲ್ಲಿ ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ (BHMS) ವ್ಯಾಸಂಗ ಮಾಡುತ್ತಿರುವ ಮಂತಾಶಾ ಕಾಝ್ಮಿ ಹಾಗೂ ಮೊಹಮ್ಮದ್ ಅಮೀರ್ ಇಬ್ಬರನ್ನೂ 6 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಹಂಗಾಮಿ ಪ್ರಾಂಶುಪಾಲ ಡಾ.ಬಿ.ಎನ್ ಸಾಹ್ನಿ ತಿಳಿಸಿದ್ದಾರೆ.
ಅಲ್ಲದೇ ಆರೋಪಿ ವಿದ್ಯಾರ್ಥಿಗಳ ಫೋನ್ಗಳಿಂದ ವೀಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಬೇರೆ ಯಾರೊಂದಿಗಾದರೂ ಶೇರ್ ಮಾಡಿಕೊಂಡಿದ್ದಾರಾ? ಅನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡಿರುವ ಬಗ್ಗೆ ಗಾಜಿಪುರದ ಪೊಲೀಸ್ ಅಧೀಕ್ಷಕ ಓಂವೀರ್ ಸಿಂಗ್ ಖಚಿತಪಡಿಸಿದ್ದಾರೆ. ಆದ್ರೆ ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಒಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದ್ರೆ ಈವರೆಗೆ ಆರೋಪಿ ವಿದ್ಯಾರ್ಥಿಗಳ ಮೋಬೈಲ್ನಿಂದ ಯಾವುದೇ ಫೋಟೋ ಹಾಗೂ ವೀಡಿಯೋಗಳನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಲಾಗಿದೆ.