ಬೆಂಗಳೂರು: ಕ್ಯಾಬ್ಗಾಗಿ ಕಾಯುತ್ತ ನಿಂತಿದ್ದ ಸಾಫ್ಟ್ವೇರ್ ಎಂಜಿನಿಯರ್ ಮುಶೀರ್ ಎಂಬುವವರನ್ನು ಸುಲಿಗೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಕಾರ್ತಿಕ್ ನಗರ ಬಸ್ ತಂಗುದಾಣ ಬಳಿ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತಮ್ಮೂರಿಗೆ ಹೋಗಿದ್ದ ಮುಶೀರ್, ಮೇ 24ರಂದು ವಿಮಾನದ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ನಂತರ, ಅಲ್ಲಿಂದ ಬಸ್ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಕಾರ್ತಿಕ್ ನಗರದ ತಂಗುದಾಣಕ್ಕೆ ಬಂದಿದ್ದರು.’ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಹೋಗಲೆಂದು ಕ್ಯಾಬ್ ಕಾಯ್ದಿರಿಸಿ, ಕಾಯುತ್ತ ನಿಂತಿದ್ದರು.
ಅದೇ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳಿಬ್ಬರು, ಚಾಕು ತೋರಿಸಿ ಬೆದರಿಸಿದ್ದರು. ಲ್ಯಾಪ್ಟಾಪ್, ಮೊಬೈಲ್ ಹಾಗೂ ಪರ್ಸ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.