ಸದ್ಯ ಎಲ್ಲಿ ನೋಡಿದ್ರು ನಿರ್ದೇಶಕ ಆರ್ ಚಂದ್ರು ಅವರದ್ದೇ ಮಾತು. ಚಂದ್ರು ಹಾಗೂ ಉಪ್ಪಿ ಕಾಂಬಿನೇಷನ್ ನ ಕಬ್ಜ ಸಿನಿಮಾ ಥಿಯೇಟರ್ ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆ ಆದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಸಿನಿಮಾಗಳನ್ನೇ ಕಬ್ಜ ಹಿಂದಿಕ್ಕಿದೆ.
ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿಯೇ ತಾಜ್ಮಹಲ್ ಎಂಬ ಸಿನಿಮಾ ಮಾಡಿ ಚೊಚ್ಚಲ ಪ್ರಯತ್ನದಲ್ಲಿಯೇ ದೊಡ್ಡ ಗೆಲುವು ಸಾಧಿಸಿದ್ದರು. ಬಳಿಕ ಬಳಿಕ ಚಾರ್ಮಿನಾರ್, ಮೈಲಾರಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಕಬ್ಜ ಸಿನಿಮಾದಲ್ಲಿ ಅಂಡರ್ವರ್ಲ್ಡ್ ಕಥೆಯನ್ನು ರಿಚ್ ಆಗಿ ತೆರೆ ಮೇಲೆ ತೋರಿಸಿರುವ ಆರ್ ಚಂದ್ರು ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್ವುಡ್ ಕಿಂಗ್ ಶಿವ ರಾಜ್ಕುಮಾರ್ ಅವರನ್ನೂ ಸಹ ಈ ಚಿತ್ರಕ್ಕೆ ಕರೆತಂದು ಕನ್ನಡ ಚಿತ್ರರಂಗದ ಮೂವರು ಬಿಗ್ ಸ್ಟಾರ್ ನಟರನ್ನು ಒಂದೇ ಚಿತ್ರಕ್ಕೆ ತಂದು ಸಾಧನೆ ಮಾಡಿದ್ದಾರೆ. ಹೀಗೆ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟರ ಕಾಲ್ಶೀಟ್ ಪಡೆದು ಸುಲಭವಾಗಿ ಸಿನಿಮಾ ಮಾಡುತ್ತಿರುವ ಆರ್ ಚಂದ್ರು ತಾವು ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ಗೆ ಸಿನಿಮಾ ಮಾಡಲೆಂದು ಮುಂದಾದಾಗ ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ.
ನಿನ್ನೆ ( ಮಾರ್ಚ್ 19 ) ನಡೆದ ಕಬ್ಜ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಚಂದ್ರು “ನನ್ನ ಚಿತ್ರವನ್ನು ಮೊದಲು ಓಟಿಟಿಯಿಂದ ಸ್ಯಾಟಲೈಟ್ವರೆಗೆ ಓಪನ್ ಆಗಿ ತೋರಿಸಿ ಇದು ಸರ್ ನನ್ನ ಸಿನಿಮಾ ಎಂದು ತೋರಿಸಿ ಹಾಕಿದ್ದ ಬಜೆಟ್ ಅನ್ನು ಅವತ್ತೇ ಸಂಪಾದಿಸಿದ್ದೆ. ಇದು ಕನ್ನಡಿಗರು ಹಾಗೂ ಭಾರತದ ಜನ ನನಗೆ ಕೊಟ್ಟಿರುವ ಪ್ರತಿಫಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀನಿ ಎಂದರೆ ಒಂದು ದೊಡ್ಡ ಪ್ರಯತ್ನ ಮಾಡುವಾಗ ನೂರಾರು ವಿಘ್ನ ಆಗುತ್ತೆ ಅಂತಾರೆ. ನಾನು ಹೊರಟು ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಎಂಬ ತೆಲುಗು ಚಿತ್ರ ಮಾಡಿದ್ದೆ. ನಾನು ಅಲ್ಲಿ ದೊಡ್ಡದಾಗಿ ಗೆದ್ದುಬಿಡಬೇಕು ಅಂತ ಅಲ್ಲಿಗೆ ಹೋದೆ, ನನಗೆ ಕೊಟ್ಟಿದ್ದೇ ಮೂರು ಕೋಟಿಯ ಸಣ್ಣ ಬಜೆಟ್. ಯಾಕೆ ಎಂದರೆ ನಾನು ಕನ್ನಡ ಡೈರೆಕ್ಟರ್ ಅಂತ” ಎಂಬ ಕಾರಣಕ್ಕೆ.
“ಸರ್ ನಾನು ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಮಾಡಬೇಕು ಸರ್ ಕಥೆ ಹೇಳ್ತಿನಿ ಸರ್ ಎಂದು ನಿರ್ಮಾಪಕರಿಗೆ ಹೇಳಿದಾಗ ಯಾರಮ್ಮ ಕನ್ನಡ ಡೈರೆಕ್ಟ್ರಾ ಬೇಡಮ್ಮ ಎಂದುಬಿಟ್ರು. ಅವತ್ತು ನಾನು ನಿರ್ಧರಿಸಿದೆ ಮೇಕಿಂಗ್ ಚೆನ್ನಾಗಿ ಮಾಡಬೇಕು ಅಂತ. ಕನ್ನಡ ಡೈರೆಕ್ಟರ್ ಅಂತ ಕಥೆ ಕೇಳೋಕೆ ಒಪ್ಪಲಿಲ್ಲ, ತುಂಬಾ ನೋವಿತ್ತು ಸರ್, ಆ ನೋವನ್ನು ಹೋಗಲಾಡಿಸಿದ್ದು ನನ್ನದೇ ಕನ್ನಡ ಚಿತ್ರರಂಗದ ದೊಡ್ಡ ತಂಡ, ಕೆಜಿಎಫ್ ಟೀಮ್. ಅದಕ್ಕೆ ನನಗೆ ಕೆಜಿಎಫ್ ಟೀಮ್ ಎಂದರೆ ಇಷ್ಟ, ಅಂತಹ ಒಂದು ಮಾತನ್ನು ಹೋಗಲಾಡಿಸಿದ್ದು ಕೆಜಿಎಫ್ ಟೀಮ್, ಪ್ರಶಾಂತ್ ನೀಲ್, ಯಶ್ ಅವ್ರು, ವಿಜಯ್ ಕಿರಗಂದೂರು ಅವ್ರು. ಕೆಲವರು ಯಾಕೆ ಅವರ ಹೆಸರನ್ನು ಪದೇ ಪದೇ ಹೇಳ್ತೀಯಾ ಅಂತಾರೆ. ಆದರೆ ಅವರು ಸಾಧನೆ ಮಾಡಿದ್ದಾರೆ. ಅದಕ್ಕೆ ನಾನು ಅವರನ್ನು ಹೊಗಳುತ್ತೇನೆ. ನಾನೂ ಆ ಥರದ ಒಂದು ಪ್ರಯತ್ನ ಮಾಡಬೇಕು ಅಂತ ಹೊರಟೆ. ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ನನ್ನ ದೇವರಾದಂತಹ ಉಪ್ಪಿ ಸರ್. ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದಾಗ ಮೂರು ವರ್ಷ ನನ್ನ ಬೆನ್ನೆಲುಬಾಗಿ ನಿಂತು ನನಗೆ ಡೇಟ್ ಕೊಟ್ಟರು” ಎಂದು ಹೇಳಿಕೆ ನೀಡಿ ಕಷ್ಟ ಬಂದಾಗ ಸಹಾಯಕ್ಕೆ ನಿಂತವರನ್ನು ನೆನೆದರು.