ಬೆಂಗಳೂರು;- ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನೋಂದಣಿ ಮಾಡುವಾಗ ನಕಲಿ ಲಿಂಕ್ ಹಾಗೂ ಆಯಪ್ಗಳ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದೆ.
ಗ್ಯಾರಂಟಿ ಯೋಜನೆಗಳಿಗೆ ನಾಗರಿಕರು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಸೈಬರ್ ಖದೀಮರು ಹಲವು ನಕಲಿ ಆಯಪ್ ಹಾಗೂ ಲಿಂಕ್ಗಳನ್ನು ಹರಿಯಬಿಟ್ಟು, ನಾಗರಿಕರ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ.
‘ಗ್ಯಾರಂಟಿ ಯೋಜನೆಗಳ ನೋಂದಣಿಗೆ ಸರ್ಕಾರ ಯಾವುದೇ ಆಯಪ್ ಅನ್ನು ಪರಿಚಯಿಸಿಲ್ಲ. ಆದರೆ ಹಲವು ನಕಲಿ ಆಯಪ್ಗಳು ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಫಲಾನುಭವಿಗಳು ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಆಯಪ್ಗಳನ್ನು ರಿಪೋರ್ಟ್ ಮಾಡಬೇಕು. ಈ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಸ್.ಡಿ ಶರಣಪ್ಪ ತಿಳಿಸಿದ್ದಾರೆ.
ಅಲ್ಲದೇ ಸೇವಾಸಿಂಧು ವೆಬ್ಸೈಟ್ ಮೂಲಕವೇ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿರುವ ನಕಲಿ ಲಿಂಕ್ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹೇಳಿದ್ದಾರೆ.