ಜೈಪುರ: ಗ್ಯಾಂಗ್ ರೇಪ್ಗೆ (Gang Rape) ಒಳಗಾಗಿದ್ದ ಮಹಿಳೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೋಗಿದ್ದಾಳೆ. ಆದರೆ ಬೆತ್ತಲಾಗಿದ್ದ ಕಾರಣದಿಂದ ಆಕೆ ಜನರಲ್ಲಿ ಸಹಾಯ ಕೇಳಿದರೂ ಆಕೆಯನ್ನು ಜನರು ಹುಚ್ಚಿ ಎಂದುಕೊಂಡು ಕಡೆಗಣಿಸಿರುವ ಘಟನೆ ರಾಜಸ್ಥಾನದ (Rajasthan) ಭಿಲ್ವಾರದಲ್ಲಿ (Bhilwara) ಶನಿವಾರ ನಡೆದಿದೆ.
ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ತನ್ನನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೊದಲಿಗೆ ದೈಹಿಕ ಹಿಂಸೆ ನೀಡಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.
ತನ್ನ ಮೇಲೆ ಅತ್ಯಾಚಾರ ಆಗಿದ್ದರೂ ಮಹಿಳೆ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಹೋಗಿದ್ದರಿಂದ ಆಕೆ ಬೆತ್ತಲಾಗಿ ಬೀದಿಗಳಲ್ಲಿ ಜನರಲ್ಲಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದರೆ ಜನರು ಆಕೆಯನ್ನು ಹುಚ್ಚಿ ಎಂದುಕೊಂಡು ಸಹಾಯ ಮಾಡಲು ನಿರಾಕರಿಸಿದ್ದಾರೆ.
ಗಂಟೆಗಳ ವರೆಗೆ ಮಹಿಳೆ ಸಹಾಯಕ್ಕಾಗಿ ಜನರಲ್ಲಿ ಬೇಡಿಕೊಂಡಿದ್ದಾಳೆ. ಕೊನೆಗೆ ಕೆಲ ಗ್ರಾಮಸ್ಥರು ಆಕೆಯ ದೇಹವನ್ನು ಮುಚ್ಚಲು ಬಟ್ಟೆಗಳನ್ನು ನೀಡಿದ್ದಾರೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮಹಿಳೆ ಆರೋಪಿಗಳಲ್ಲಿ ಒಬ್ಬನ ಪರಿಚಯವಿರುವುದಾಗಿ ತಿಳಿಸಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆರೋಪಿಗಳಾದ ಛೋಟು (42) ಹಾಗೂ ಗಿರ್ಧಾರಿಯನ್ನು (30) ಬಂಧಿಸಿದ್ದಾರೆ.