ನವದೆಹಲಿ: ಸ್ಪೇನ್ ಮೂಲದ ಮಹಿಳೆಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ರಾತ್ರಿ ಜಾರ್ಖಂಡ್ ರಾಜಧಾನಿ ರಾಂಚಿಯಿಂದ 300 ಕಿ.ಮೀ ದೂರದಲ್ಲಿರುವ ಡುಮ್ಕಾದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.
ಮಹಿಳೆ ಇನ್ಸ್ಟ್ರಾಗಮ್ ಈ ಸಂಬಂಧ ಭಯಾನಕ ಅನುಭವವನ್ನು ವಿವರಿಸಿದ್ದಾಳೆ. ಏಳು ಪುರುಷರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆರಂಭದಲ್ಲಿ ಹೊಡೆದು ಬಡಿದು ನಮ್ಮ ವಸ್ತುಗಳನ್ನು ದರೋಡೆ ಮಾಡಿದರು. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಮಹಿಳೆ ಹೇಳಿದ್ದಾಳೆ. ಬಾಂಗ್ಲಾದೇಶದಿಂದ ಎರಡು ಬೈಕ್ಗಳಲ್ಲಿ ಆಗಮಿಸಿದ ದಂಪತಿ ಬಿಹಾರದ ಮೂಲದ ನೇಪಾಳಕ್ಕೆ ಹೋಗಲು ಮುಂದಾಗಿದ್ದರು. ಡುಮ್ಕಾದಲ್ಲಿ ಹೊರ ಭಾಗದಲ್ಲಿ ತಾತ್ಕಾಲಿಕ ಟೆಂಟ್ನಲ್ಲಿ ತಂಗಿದ್ದಾಗ 7 ಮಂದಿ ಆಗಮಿಸಿ ದರೋಡೆ ಮಾಡಿ ಥಳಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?
ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ರಸ್ತೆ ಬದಿಯಲ್ಲಿ ಇಬ್ಬರು ತಿರುಗಾಡುತ್ತಿರುವುದು ಪೊಲೀಸರ ಗಸ್ತು ತಂಡ ಗಮನಿಸಿದೆ. ವಿದೇಶಿಯರು ಯಾವುದೋ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಭಾವಿಸಿ ಅವರೊಂದಿಗೆ ಮಾತನಾಡಲು ಮುಂದಾಗಿದ್ದಾರೆ. ಇಬ್ಬರೂ ಸ್ಪ್ಯಾನಿಷ್ ಭಾಷೆ ಮಾತನಾಡುತ್ತಿದ್ದರಿಂದ ಪೊಲೀಸರಿಗೆ ಅವರು ಏನು ಹೇಳುತ್ತಿದ್ದಾರೆಂದು ಅರ್ಥವಾಗಲಿಲ್ಲ. ನಂತರ ಇವರಿಗೆ ಸ್ವಲ್ಪ ಚಿಕಿತ್ಸೆ ಅಗತ್ಯವಿದೆ ಎಂದು ಭಾವಿಸಿ ಪೊಲೀಸರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದರು.
ಈ ವೇಳೆ ಆಸ್ಪತ್ರೆಯ ವೈದ್ಯರ ಜೊತೆ ಸ್ಪ್ಯಾನಿಷ್ ದಂಪತಿ ತಮಗೆ ಆದ ಅನುಭವವನ್ನು ತಿಳಿಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ತನಿಖೆಗೆ ಇಳಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಮೂವರು ಒಪ್ಪಿಕೊಂಡಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.