ಕೂದಲು ಉದುರುವುದನ್ನು ತಡೆಯಲು ನೆತ್ತಿ ಆರೋಗ್ಯಕರವಾಗಿರಬೇಕು. ಆಗ ಮಾತ್ರ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಕೂದಲನ್ನು ನೈಸರ್ಗಿಕವಾಗಿ ಆರೋಗ್ಯವಾಗಿಡಲು ಪ್ಲಾಸ್ಟಿಕ್ ಬಾಚಣಿಗೆಯ ಬದಲಿಗೆ ‘ಮರದ ಬಾಚಣಿಗೆ’ ಬಳಸಿದರೆ ಉತ್ತಮ ಅಂತಾರೆ ತಜ್ಞರು. ಮರದ ಬಾಚಣಿಗೆ ಉತ್ತಮ ನೆತ್ತಿಯ ಮಸಾಜ್ ಆಗಿ ಕೆಲಸ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅದರಲ್ಲೂ ಬೇವಿನ ಮರದ ಬಾಚಣಿಗೆ ತುಂಬಾ ಒಳ್ಳೆಯದು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ಆಯುರ್ವೇದದಲ್ಲಿ ಬೇವಿಗೆ ಎಷ್ಟು ಮಹತ್ವವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಬೇವಿನ ಬಾಚಣಿಗೆಯಿಂದ ತಲೆ ಬಾಚಿಕೊಂಡರೆ ತುರಿಕೆ, ಉಣ್ಣು, ನೆತ್ತಿಯ ಸೋಂಕು, ಕೂದಲು ಉದುರುವುದನ್ನು ತಡೆಯುತ್ತದೆ. ಮರದ ಬಾಚಣಿಗೆಯನ್ನು ಬಳಸುವುದರಿಂದ ನೆತ್ತಿಯ ರಕ್ತ ಪರಿಚಲನೆ ಸುಧಾರಿಸಿ ಕೂದಲಿನ ಬುಡ ಗಟ್ಟಿಯಾಗುತ್ತದೆ.
ಸೂಕ್ಷ್ಮ ನೆತ್ತಿಯಿರುವ ಜನರು ಪ್ಲಾಸ್ಟಿಕ್ ಬಾಚಣಿಗೆಯಿಂದ ಅಲರ್ಜಿ ಸಮಸ್ಯೆಯನ್ನು ಎದುರಿಸಬಹುದು. ಅಂತಹವರು ಖಂಡಿತವಾಗಿಯೂ ಮರದ ಬಾಚಣಿಗೆ ಬಳಸಬೇಕು. ಬೇವಿನ ಮರದ ಬಾಚಣಿಗೆಯನ್ನು ಬಳಸುವುದರಿಂದ ಕೂದಲು ಉತ್ತಮ ಬೌನ್ಸ್ ನೀಡುತ್ತದೆ. ಮರದ ಬಾಚಣಿಗೆಯ ನಿಯಮಿತ ಬಳಕೆಯು ಕೂದಲು ಕಿರುಚೀಲಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.