ತಿರುಪತಿ ಸಮೀಪದ ಜಲಪಾತವೊಂದಕ್ಕೆ ವಿಹಾರಕ್ಕೆ ಹೋದ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ. ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್ ಅಮೀನ್ (23) ಮೃತ ಯುವಕ.
ಪ್ರಕರಣ ವಿವರ: ಸುಮಂತ್ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ತಂದೆಯ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಫಾಲ್ಸ್ಗೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು.
ಈ ಸಂದರ್ಭ ಬಂಡೆಕಲ್ಲಿನಿಂದ 10 ಅಡಿ ಕೆಳಭಾಗಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ. ಸುಮನ್ ಸಹಾಯಕ್ಕಾಗಿ ಕೂಗಿದರೂ ಏನೂ ಪ್ರಯೋಜನವಾಗಿಲ್ಲ. ಇದನ್ನು ನೋಡಿದ ಗೆಳೆಯ ಕೂಡಲೇ ಧಾವಿಸಿ ಬಂದು ಸುಮಂತ್ನನ್ನು ಮೇಲಕ್ಕೆತ್ತಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಕೂಡಲೇ ಮನೆಯಲ್ಲಿರುವವರಿಗೆ ವಿಚಾರ ತಿಳಿಸಲಾಗಿದ್ದು, ಭಾನುವಾರ ಬೆಳಗ್ಗೆ ಮೃತದೇಹವನ್ನು ಕುಳಾಯಿ ಹೊನ್ನೆಕಟ್ಟೆಯಲ್ಲಿರುವ ಮನೆಗೆ ತಂದು ಬಳಿಕ ಅಂತ್ಯಸಂಸ್ಕಾರ ಮಾಡಲಾಯಿತು.