ಆಕಳು ಮೈ ತೊಳೆಯಲು ಹೋಗಿದ್ದ ವೇಳೆ ಯುವಕನೋರ್ವ ವರದಾ ನದಿಯಲ್ಲಿ ನೀರು ಪಾಲಾದ ಘಟನೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದ ಬಳಿ ನಡೆದಿದೆ. ನೀರು ಪಾಲಾದ ಯುವಕನನ್ನು ಗಾಳೆಪ್ಪ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ಗಾಳೆಪ್ಪ ಆಕಳು ಮೇಯಿಸಿಕೊಂಡು ನಂತರ ಆಕಳಿನ ಮೈ ತೊಳೆಯಲು ನದಿಗೆ ಬಂದಿದ್ದ.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೀರು ಪಾಲಾದ ಗಾಳೆಪ್ಪನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಗಾಳೆಪ್ಪನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.