ನವದೆಹಲಿ: ಮಾಳವೀಯಾ ನಗರದಲ್ಲಿ (Malviya City) ಶುಕ್ರವಾರ ಯುವತಿಯ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ (Police Investigation) ಅನೇಕ ಸಂಗತಿಗಳು ಹೊರಬಿದ್ದಿವೆ.
ಕಮಲಾ ನೆಹರೂ ವಿಶ್ವವಿದ್ಯಾಲಯದಲ್ಲಿ (Kamala Nehru College) ವಿದ್ಯಾಭ್ಯಾಸ ಮುಗಿಸಿದ್ದ ಮೃತ ಯುವತಿ ನರ್ಗೀಸ್ ಮಾಳವೀಯಾ ನಗರದಲ್ಲಿ ಸ್ಟೆನೋಗ್ರಾಫರ್ ಕೋರ್ಸ್ ಮಾಡುತ್ತಿದ್ದಳು. ಆರ್ಥಿಕವಾಗಿ ಸ್ವಾವಲಂಭಿಯಾಗಲು ಬಯಸಿದ್ದ ಈಕೆ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಳೆದ 5-6 ವರ್ಷಗಳ ಹಿಂದೆ ಆರೋಪಿ ಇರ್ಫಾನ್ ಕುಟುಂಬದೊಂದಿಗೆ ನರ್ಗೀಸ್ ಕುಟುಂಬದವರು ವಾಸಿಸುತ್ತಿದ್ದರು. ಆದ್ರೆ ಇರ್ಫಾನ್ ನರ್ಗೀಸ್ಗೆ ಕಿರುಕುಳ ನೀಡಲು ಪ್ರಾರಂಭಿಸಿದ ನಂತರ ಮನೆ ತೊರೆಯಬೇಕಾಯಿತು. ಈ ಕುರಿತು ಮಾತನಾಡಿರುವ ಮೃತಳ ತಂದೆ ಸುಲ್ಜಾತ್, ಇರ್ಫಾನ್ ಪೋಷಕರಿಗೆ ಇಬ್ಬರು ಮಕ್ಕಳಿದ್ದಾರೆ. ಆದ್ರೆ ನನಗೆ ಇದ್ದಿದ್ದು ಒಬ್ಬಳೇ ಮಗಳು. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು. ಇರ್ಫಾನ್ಗೆ ಕ್ಷಮೆ ಎಂಬುದೇ ಇಲ್ಲ, ಕಠಿಣ ಶಿಕ್ಷೆ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ.
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಇರ್ಫಾನ್ಗೆ ಖಾಯಂ ಕೆಲಸ ಇಲ್ಲ ಎಂಬ ಕಾರಣಕ್ಕೆ ನರ್ಗೀಸ್ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ಅದಾದ ಮೇಲೆ ನರ್ಗೀಸ್ ಸಹ ಇರ್ಫಾನ್ನಿಂದ ಯಾವುದೇ ಫೋನ್ಕರೆಗಳನ್ನೂ ಸ್ವೀಕರಿಸದೇ ಮಾತನಾಡುವುದನ್ನ ನಿಲ್ಲಿಸಿದ್ದಳು. ಇದರಿಂದ ಕೋಪಗೊಂಡ ಇರ್ಫಾನ್ ಆಕೆಯನ್ನ ಮುಗಿಸಲು ಸ್ಕೆಚ್ ಹಾಕಿದ್ದಾನೆ.
3 ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಪಾಪಿ ಪ್ರೇಮಿ:
ಮೂರು ದಿನಗಳ ಹಿಂದೆಯೇ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿ ಇರ್ಫಾನ್ ನರ್ಗೀಸ್ನ ಪ್ರತಿದಿನದ ಕೆಲಸಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಅಲ್ಲದೇ ಅವಳು ಸ್ಟೆನೋಗ್ರಫಿ ತರಗತಿ ಮುಗಿಸಿದ ಬಳಿಕ ಸಮೀಪದ ಪಾರ್ಕ್ ಹಾದು ಹೋಗುತ್ತಾಳೆ ಅನ್ನೋದೂ ಅವನಿಗೆ ಗೊತ್ತಿತ್ತು.
ಹಾಗೆಯೇ ಶುಕ್ರವಾರ ಪಾರ್ಕ್ ದಾಟಿ ನರ್ಗೀಸ್ ಹೋಗುತ್ತಿದ್ದಾಗ ಮಾತನಾಡಬೇಕು ಬಾ ಅಂತಾ ಕರೆದು ರಾಡ್ನಿಂದ ಹೊಡೆದು ಕೊಂದೇಬಿಟ್ಟಿದ್ದಾನೆ. ಪೊಲೀಸ್ ತನಿಖೆಯಲ್ಲಿ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗಿದ್ದ ಕೆಲವೇ ಗಂಟೆಗಳಲ್ಲಿ ಆರೋಪಿ ಇರ್ಫಾನ್ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.