ಮದುವೆ ದಿನ ಸುಂದರವಾಗಿ ಕಾಣಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಅದೇ ಕಾರಣಕ್ಕೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ಕೆಲವರು ದುಭಾರಿ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಇವುಗಳ ಕೆಲವೊಮ್ಮೆ ಜೀವಕ್ಕೆ ಮಾರಕವು ಹೌದು.
ಲಾರಾ ಫೆರ್ನಾಂಡಿಸ್ ಕೋಸ್ಟಾ(31) ಎಂಬಾಕೆ ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಗ್ಯಾಸ್ಟ್ರಿಕ್ ಬಲೂನ್ ಸರ್ಜರಿ ಮೊರೆ ಹೋಗಿದ್ದಾಳೆ. ಲಾರಾ ತನ್ನ ಬಹುಕಾಲದ ಪ್ರಿಯಕರ ಮ್ಯಾಥ್ಯೂಸ್ ನೊಂದಿಗೆ ವಿವಾಹವಾಗಲು ಸೆಪ್ಟೆಂಬರ್ 7ರಂದು ದಿನ ನಿಗದಿಯಾಗಿತ್ತು. ಇನ್ನೇನು ಮದುವೆಗೆ ತಿಂಗಳುಗಳು ಬಾಕಿ ಇರುವಾಗ ತೂಕ ಇಳಿಸಿಕೊಳ್ಳಲು ಬಯಸಿದ್ದಾಳೆ. ಹೀಗಾಗಿ ಸುಮಾರು 8ಕೆಜಿ ತೂಕ ಕಳೆದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಏಪ್ರಿಲ್ 26 ರಂದು ಬ್ರೆಜಿಲ್ನ ಬೆಲೊ ಹಾರಿಜಾಂಟೆಯ ಕ್ಲಿನಿಕ್ನಲ್ಲಿ ಹೊಟ್ಟೆಯೊಳಗೆ ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಸರ್ಜರಿಯಾದ ಕೆಲ ದಿನಗಳ ಬಳಿಕ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೇ 01ರಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರು ಆಕೆಯನ್ನು ಪರೀಕ್ಷಿಸಿ ಆಕೆಯ ಹೊಟ್ಟೆಯೊಳಗಿದ್ದ ಗ್ಯಾಸ್ಟ್ರಿಕ್ ಬಲೂನ್ ಹೊರ ತೆಗೆದಿದ್ದಾರೆ. ಬಳಿಕ ಆಕೆಯ ಹೊಟ್ಟೆಯಲ್ಲಿ ರಂಧ್ರ ಉಂಟಾಗಿದ್ದು, ಅದು ಹೊಟ್ಟೆಯ ಸುತ್ತಲೂ ಸೋಂಕನ್ನು ಉಂಟುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ ಯುವತಿ ಮೇ 07ರಂದು ಸಾವನ್ನಪ್ಪಿದ್ದಾಳೆ.
ಗ್ಯಾಸ್ಟ್ರಿಕ್ ಬಲೂನ್ ಅನ್ನು ಇಂಟ್ರಾಗ್ಯಾಸ್ಟ್ರಿಕ್ ಬಲೂನ್ ಅಥವಾ ಹೊಟ್ಟೆಯ ಬಲೂನ್ ಎಂದೂ ಕರೆಯುತ್ತಾರೆ. ಗಾಳಿ ತುಂಬಿದ ಬಲೂನ್ ಅನ್ನು ಟ್ಯೂಬ್ ಮೂಲಕ ಮೌಖಿಕವಾಗಿ ನಿಮ್ಮ ಹೊಟ್ಟೆಯೊಳಗೆ ಇರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಲವಣಯುಕ್ತ ತುಂಬಿದ ಸಿಲಿಕೋನ್ ಚೀಲ ಹೊಟ್ಟೆಯೊಳಗೆ ಪೂರ್ಣತೆಯ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಇದರಿಂದ ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.