ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಡೆಸಿಕೊಡುವ ಚಾಪ್ಟರ್ 2 ಪಾಡ್ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಆಮೀರ್ ಖಾನ್ ಭಾಗಿಯಾಗಿ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ತನ್ನ ಮನದಾಳದ ದುಃಖಗಳನ್ನು ಹೊರ ಹಾಕಿ ಕಣ್ಣೀರಿಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಮೀರ್ ಖಾನ್ ಕೊಡಬೇಕಾದ ಸಮಯದಲ್ಲಿ ತಮ್ಮ ಮೂವರು ಮಕ್ಕಳಿಗೆ ಸಾಕಷ್ಟು ಸಮಯ ಮತ್ತು ಗಮನವನ್ನು ಕೊಡದಿದ್ದುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
“ಆ ಸಮಯದಲ್ಲಿ ಇರಾ ಡಿಪ್ರೆಶನ್ ಜೊತೆಗೆ ಹೋರಾಡುತ್ತಿದ್ದಳು. ಈಗ ಗುಣಮುಖಳಾಗಿದ್ದಾಳೆ. ಆದರೆ ಆಗ ಅವಳಿಗೆ ನನ್ನ ಅಗತ್ಯವಿತ್ತು. ಈಗ ಜುನೈದ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುತ್ತಿದ್ದಾನೆ. ಅವನು ಇದುವರೆಗೆ ನಾನಿಲ್ಲದೆ ತನ್ನ ಜೀವನವನ್ನು ನಡೆಸಿದ್ದಾನೆ. ಈಗ ತನ್ನ ಜೀವನದ ಬಹುಮುಖ್ಯ ಹೆಜ್ಜೆಯನ್ನು ತನ್ನ ವೃತ್ತಿಜೀವನದ ಕಡೆಗೆ ತೆಗೆದುಕೊಳ್ಳುತ್ತಿದ್ದಾನೆ. ಈ ಸಮಯದಲ್ಲಿ ನಾನು ಅವನೊಂದಿಗೆ ಇಲ್ಲದಿದ್ದರೆ, ಆಮೇಲೆ ಏನು ಪ್ರಯೋಜನ? ಆಜಾದ್ಗೆ ಈಗ 9 ವರ್ಷ. ಇನ್ನು 3 ವರ್ಷಗಳಲ್ಲಿ ಆತ ಹದಿಹರೆಯದವನಾಗುತ್ತಾನೆ. ಅವನ ಬಾಲ್ಯ ಮರಳಿ ಬರುವುದಿಲ್ಲ.” ಎಂದಿದ್ದಾನೆ ಆಮೀರ್.
“ನನ್ನ ಮಕ್ಕಳ ಬಗ್ಗೆ ನನಗೆ ಬಲವಾದ ಪ್ರೀತಿ ಇರಲಿಲ್ಲ ಅಂತಲ್ಲ. ನನ್ನ ಕುಟುಂಬಕ್ಕಾಗಿ ನಾನು ತುಂಬಾ ಕೆಲಸ ಮಾಡಿದ್ದೇನೆ. ಆದರೆ ಆ ವೇಳೆಯಲ್ಲಿ ನನ್ನ ಸುತ್ತ ನನ್ನ ವೃತ್ತಿಕ್ಷೇತ್ರದ ಆಪ್ತರು ಹೆಚ್ಚಾಗಿದ್ದರು. ನಾನು ಪ್ರೇಕ್ಷಕರನ್ನು ಗೆಲ್ಲಬೇಕಾಗಿತ್ತು. ನನ್ನ ಚಿತ್ರಗಳು ಮತ್ತು ಕಥೆಗಳ ಮೂಲಕ ನಾನು ಅವರೊಂದಿಗೆ ಇದ್ದೆ. ಅವರನ್ನು ಎಂಟರ್ಟೇನ್ ಮಾಡುವ ಭರವಸೆಯನ್ನು ನಾನು ನೀಡಿದ್ದೆ. ಆದರೆ ಇರಾ ಮತ್ತು ಜುನೈದ್ ಐದಾರು ವರ್ಷದವರಾಗಿದ್ದಾಗ, ಅವರ ಭಾವನೆಗಳ ಬಗ್ಗೆ, ಅವರ ಸಮಸ್ಯೆಗಳೇನು, ಆಗ ಅವರಿಗೆ ಏನು ಬೇಕಿತ್ತು ಅಥವಾ ಅವರ ಸವಾಲುಗಳ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ” ಎಂದು ಆಮೀರ್ ನೋವು ತೋಡಿಕೊಂಡಿದ್ದಾರೆ.
ಆ ಸಮಯವನ್ನು ತನಗೆ ತುಂಬಾ ಕಷ್ಟಕರವಾಗಿತ್ತು. ಆದರೆ ಈಗ ಇರಾ ಮತ್ತು ಜುನೈದ್ ಅವರ ಬಾಲ್ಯ ಹಿಂತಿರುಗುವುದಿಲ್ಲವಲ್ಲ! ಕಳೆದ 30 ವರ್ಷಗಳಲ್ಲಿ ನಾನು ನನ್ನ ತಂದೆ-ತಾಯಿಯೊಂದಿಗೂ ಹೆಚ್ಚು ಸಮಯ ಕಳೆಯಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಆ ಸಮಯ ಎಂದಿಗೂ ಹಿಂತಿರುಗುವುದಿಲ್ಲ ಎಂದು ಆಮೀರ್ ಖಾನ್ ಭಾವುಕರಾದರು.