ಸ್ಥಳೀಯ ಚುನಾವಣಾ ಅಧಿಕಾರಿಗಳು ಬಿಜೆಪಿ ಪರವಾಗಿ ವರ್ತಿಸುತ್ತಿದ್ದು, ಆಮ್ ಆದ್ಮಿ ಪಾರ್ಟಿ(Aam Aadmi Party) ವಿರುದ್ಧ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕೀಲರ ಘಟಕದ ಸದಸ್ಯರಾದ ಗಂಗಾಧರ್ ಆರೋಪಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗಂಗಾಧರ್, “ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳಿಗೆ ಬಿಜೆಪಿ ಅಭ್ಯರ್ಥಿಗಳು ತೊಂದರೆ ನೀಡುತ್ತಿದ್ದಾರೆ. ಜೊತೆಗೆ, ಚುನಾವಣಾ ಅಧಿಕಾರಿಗಳು ಕೂಡ ತಾರತಮ್ಯ ಮಾಡುತ್ತಿದ್ದಾರೆ. ಎಎಪಿ ಮುಖಂಡರು ನೀಡುವ ದೂರುಗಳಿಗೆ ಚುನಾವಣಾ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
“ಬೆಂಗಳೂರಿನ ಗಾಂಧಿನಗರ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮೀ ಲೇಔಟ್, ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ಆರ್ಒಗಳು ಎಎಪಿಗೆ ನೋಟಿಸ್ಗಳನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ. ಮನೆಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮನೆಮನೆ ಪ್ರಚಾರಕ್ಕೂ ಅವಕಾಶ ನೀಡದಿದ್ದರೆ ಪ್ರಚಾರ ಮಾಡುವುದು ಹೇಗೆ? ಮನೆಮನೆ ಪ್ರಚಾರಕ್ಕೆ 48 ಗಂಟೆ ಕಾಲ ಮೊದಲೇ ಎಲ್ಲ ವಿವರಗಳನ್ನು ನೀಡಿ ಅನುಮತಿ ಪಡೆಯಬೇಕೆಂದು ಹೇಳುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಖಾತೆಗಳಲ್ಲಿ ಜಾಹೀರಾತಲ್ಲದ ಪೋಸ್ಟ್ ಹಾಕುವುದಕ್ಕೂ ಚುನಾವಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ” ಎಂದು ಗಂಗಾಧರ್ ಬೇಸರ ವ್ಯಕ್ತಪಡಿಸಿದರು.