ನವದೆಹಲಿ: ಯುಗಾದಿ ಹಬ್ಬದಂದು ದೆಹಲಿ ಸರ್ಕಾರ ₹ 78,800 ಕೋಟಿ ಗಾತ್ರದ ಭಾರಿ ಬಜೆಟ್ ಮಂಡನೆ ಮಾಡಿದೆ.
ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದು, ಮೂಲಸೌಕರ್ಯಕ್ಕೆ ₹22,000, ಶಿಕ್ಷಣಕ್ಕೆ ₹ 16 ಸಾವಿರ ಕೋಟಿ, ಆರೋಗ್ಯಕ್ಕೆ ₹ 9 ಸಾವಿರ ಕೋಟಿ, ಜಾಹೀರಾತುಗಳಿಗೆ ₹ 550 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಲದ ಬಜೆಟ್ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದರು. ಮಂಗಳವಾರವೇ ಬಜೆಟ್ ಮಂಡಣೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ಬಜೆಟ್ ಮಂಡನೆ ಒಂದು ದಿನ ವಿಳಂಬವಾಯಿತು.
ಬಜೆಟ್ನಲ್ಲಿನ ಮೂಲಸೌಕರ್ಯ, ಜಾಹೀರಾತು ಮತ್ತು ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಸಚಿವಾಲಯ ದೆಹಲಿ ಬಜೆಟ್ಗೆ ಅನುಮೋದನೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ಅವರ ಕಳವಳಗಳನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಪರಿಹರಿಸಿದ ನಂತರ ಬಜೆಟ್ ಮಂಡಿಸುವ ದಾರಿ ಸುಲಭವಾಗಿದೆ.