ದೆಹಲಿ : ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರಿಗೆ ಅಕ್ಟೋಬರ್ 13 ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಕಸ್ಟಡಿಯನ್ನು ವಿಸ್ತರಿಸಿದೆ. ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಭಾಗವಾಗಿ ಸಂಜಯ್ ಸಿಂಗ್ ಅವರನ್ನು ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಅಕ್ಟೋಬರ್ 4ರಂದು ಸಂಜಯ್ ಸಿಂಗ್ ಅವರ ಮನೆಯ ಮೇಲೆ ಕೇಂದ್ರ ತನಿಖಾ ಸಂಸ್ಥೆ ದಾಳಿ ಮಾಡಿತ್ತು. ಆ ದಿನವೇ ಸಂಜೆ ಅವರನ್ನು ಬಂಧಿಸಲಾಗಿತ್ತು. ಸಂಜಯ್ ಸಿಂಗ್ ನಮ್ಮ ತನಿಖೆಗೆ ಸಹಕಾರಿಸುತ್ತಿಲ್ಲ, ಹೀಗಾಗಿ ಹೆಚ್ಚಿನ ತನಿಖೆಗಾಗಿ ಅವರನ್ನು ಸ್ವಲ್ಪ ಸಮಯದ ವರೆಗೆ ಕಸ್ಟಡಿಗೆ ನೀಡಬೇಕು ಎಂದು ಇಡಿ 5 ದಿನಗಳ ಕಾಲಾವಕಾಶವನ್ನು ಕೋರ್ಟ್ ಮುಂದೆ ಕೇಳಿತ್ತು.
ಇಡಿ ತನ್ನ ಚಾರ್ಜ್ಶೀಟ್ನಲ್ಲಿ ಈಗಾಗಲೇ ರದ್ದಾದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಸಂಜಯ್ ಸಿಂಗ್ ಪ್ರಮುಖ ಪಾತ್ರ ಇದೆ ಎಂದು ಹೇಳಿದೆ. ಈ ನೀತಿಗೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಅವರು ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಹಣ ಸ್ವೀಕರ ಮಾಡಿದ್ದಾರೆ ಎಂದು ಹೇಳಿದೆ.