ಅಪಹರಣಗೊಂಡಿದ್ದ ಮಗುವಿಗೆ ಎದೆ ಹಾಲುಣಿಸಿದ ಮಹಿಳಾ ಪೊಲೀಸ್..!

ರಾಷ್ಟ್ರೀಯ

ಕಲ್ಲಿಕೋಟೆಅಪಹರಣಕ್ಕೊಳಗಾಗಿದ್ದ 12 ದಿನದ ಪುಟ್ಟಮಗುವಿಗೆ ಮಹಿಳಾ ಪೊಲೀಸ್‌ ಅಧಿಕಾರಿ ಎದೆಹಾಲು ಕುಡಿಸಿ ಅದರ ಪ್ರಾಣ ಕಾಪಾಡಿದ ಮನಕಲಕುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಪೂಲಕ್ಕಡವು ನಿವಾಸಿಯಾಗಿರುವ ಆಶಿಖಾ ಎಂಬ ಮಹಿಳೆ ಚೆವಾಯೂ ರು ಪೊಲೀಸ್‌ ಠಾಣೆಯಲ್ಲಿ ತನ್ನ ಪತಿ ಆದಿಲ್‌ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ಅಪಹರಿಸಿದ್ದಾರೆ ಎಂದು ಅ.22ರಂದು ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಪರಿಶೀಲನೆ ನಡೆಸಿದಾಗ ಮಹಿಳೆಯ ಪತಿ ಹಸುಗೂಸನ್ನು ಸುಲ್ತಾನ್‌ಬತೇರಿಗೆ ಒಯ್ದಿದ್ದು, ಅಲ್ಲಿಂದ ಬೆಂಗಳೂರಿಗೆ ರವಾನೆ ಮಾಡುವ ಸಿದ್ಧತೆ ನಡೆಸಿದ್ದು ಕಂಡುಬಂದಿತ್ತು.

ಕೇರಳದ ಪೊಲೀಸ್ ಮಮತೆಗೆ ಮೆಚ್ಚುಗೆ
ಈ ವೇಳೆ ಅಲ್ಲಿಗೆ ದಾಳಿ ನಡೆಸಿದ ಪೊಲೀಸರು ಮಗುವನ್ನು ರಕ್ಷಿಸಿ, ಆದಿಲ್‌ನನ್ನು ವಶಕ್ಕೆ ಪಡೆದಿತ್ತು. ಆದರೆ ಮಗುವಿಗೆ ಬಹಳ ಸಮಯ ದಿಂದಲೂ ಆಹಾರ ನೀಡದೇ ಇರುವುದರಿಂದ ಅದರ ಆರೋಗ್ಯ ಹದಗೆಟ್ಟಿತ್ತು. ಈ ವೇಳೆ ಚೆವಾಯೂರು ಸಿವಿಲ್‌ ಪೊಲೀಸ್‌ ಅಧಿಕಾರಿ ರಮ್ಯಾ ಠಾಣೆಯಲ್ಲಿ ತಾವೇ ಮಗುವಿಗೆ ಕುಡಿಸಿ ಮನಗೆದ್ದಿದ್ದಾರೆ. ಅದಕ್ಕೂ ಮೊದಲು ರಮ್ಯಾ ವೈದ್ಯರಿಗೆ ಕರೆ ಮಾಡಿ ಅವರ ಅನುಮತಿ ಕೇಳಿದ್ದಾರೆ. ರಮ್ಯಾ ಒಂದು ವರ್ಷದ ಮಗುವಿನ ತಾಯಿಯಾಗಿದ್ದು, ಹೀಗಾಗಿ ಕಂದಮ್ಮನಿಗೆ ಹಾಲು ಕುಡಿಸುವುದರಿಂದ ತೊಂದರೆಯಿದೆಯೇ ಎಂದು ವಿಚಾರಿಸಿದ್ದಾರೆ. ವೈದ್ಯರು ಒಪ್ಪಿಗೆ ನೀಡಿದ ಬಳಿಕ 12 ದಿನದ ಪುಟ್ಟಮಗುವಿಗೆ ರಮ್ಯಾ ಹಾಲು ಕುಡಿಸಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶದರಿಂದ ಅಭಿನಂದನೆ
ಕಿಡ್ನಾಪ್‌ ಆಗಿದ್ದ ಮಗುವಿಗೆ ಹಾಲು ಕುಡಿಸಿದ ರಮ್ಯಾ ಇದು ನನ್ನ ಜೀವನದ (Life) ಅತ್ಯಂತ ಖುಷಿಯ, ನೆನಪಿನಲ್ಲಿ ಉಳಿಯುವ ದಿನ ಎಂದು ಹೇಳಿಕೊಂಡಿದ್ದಾರೆ. ಈ ಘಟನೆ ವರದಿಯಾಗಿದ್ದ ಬೆನ್ನಲ್ಲೇ ಕೇರಳದ ಹೈಕೋರ್ಚ್‌ ನ್ಯಾಯಾಧೀಶ ದೇವನ್‌ ರಾಮಚಂದ್ರನ್‌ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಮ್ಯ ಅವರಿಗೆ ಪತ್ರದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಮಾತ್ರವಲ್ಲ ಸ್ಟೇಟ್ ಪೊಲೀಸ್ ಮೀಡಿಯಾ ಸೆಲ್‌ನಿಂದ ಸರ್ಟಿಫಿಕೇಟ್‌ನ್ನು ಸಹ ಕಳುಹಿಸಲಾಗಿದೆ. ಈ ಅಭಿನಂದನಾ ಪತ್ರದಲ್ಲಿ ನ್ಯಾಯಾಧೀಶ ದೇವನ್‌ ರಾಮಚಂದ್ರನ್‌, ‘ಇಂದು ನೀವು ಪೊಲೀಸ್‌ ಇಲಾಖೆಯ ಉತ್ತಮ ಮುಖವನ್ನು ಜನತೆಗೆ ತೋರಿಸಿದ್ದೀರಿ. ಉತ್ತಮ ಅಧಿಕಾರಿ ಮತ್ತು ನಿಜವಾದ ತಾಯಿ’ ಎಂದು ಹೊಗಳಿದ್ದಾರೆ.