ಚೆನ್ನೈ: 1992ರಲ್ಲಿ ವಿಶ್ವಕಪ್ (World Cup 2023) ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಪಾಕ್ ತಂಡ ಮರ್ಮಾಘಾತಕ್ಕೀಡಾಗಿದೆ. ಆರಂಭಿಕ ಪಂದ್ಯಗಳಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ (SriLanka) ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಪಾಕ್ ಬಳಿಕ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ.
ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಏಕದಿನ ವಿಶ್ವಕಪ್ ಟೂರ್ನಿಯ 22ನೇ ಪಂದ್ಯದಲ್ಲಿ ಅದ್ಭುತ ಆಟವಾಡಿದ ಅಫ್ಘಾನಿಸ್ತಾನ ತಂಡ 8 ವಿಕೆಟ್ಗಳಿಂದ ಬದ್ಧ ಎದುರಾಳಿ ಪಾಕಿಸ್ತಾನ (Pakistan) ತಂಡವನ್ನ ಬಗ್ಗು ಬಡಿಯಿತು. ಇದರಿಂದ ಪಾಕಿಸ್ತಾನ ತಂಡ ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ (Afghanistan) ಎದುರು ಮುಗ್ಗರಿಸಿ ಹ್ಯಾಟ್ರಿಕ್ ಸೋಲಿನ ಆಘಾತಕ್ಕೊಳಗಾಗಿದೆ
ಈ ನಡುವೆ, ಪಾಕ್ ತಂಡದ ಆರಂಭಿಕ ಆಟಗಾರ, ಅಬ್ದುಲ್ಲಾ ಶಫೀಕ್ ಭಾವುಕವಾಗಿ ಟ್ವೀಟ್ ಮೂಲಕ ಪಾಕಿಸ್ತಾನ ಜನತೆಗೆ ಕ್ಷಮೆ ಕೋರಿದ್ದಾರೆ. ನಾಯಕ ಬಾಬರ್ ಆಜಂ (Babar Azam) ಜೊತೆಗೆ ಅಫ್ಘಾನಿಸ್ತಾನದ ವಿರುದ್ಧ ಸೋತು ಮೈದಾನದಿಂದ ಹೊರನಡೆಯುತ್ತಿದ್ದ ಚಿತ್ರವನ್ನು ಹಂಚಿಕೊಂಡಿದ್ದು, ನಮ್ಮನ್ನು ಕ್ಷಮಿಸಿಬಿಡಿ ಪಾಕಿಸ್ತಾನ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಒಡೆದ ಹೃದಯದ ಇಮೋಜಿಯನ್ನೂ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದ್ದ ಪಾಕಿಸ್ತಾನ ಈ ಬಾರಿ ಖಂಡಿತ ಫೈನಲ್ ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೀಗ ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಹಾದಿ ಮುಳ್ಳಿನ ಹಾದಿಯಾಗಿದೆ. ಉಳಿದ ನಾಲ್ಕರಲ್ಲಿ 4 ಪಂದ್ಯಗಳನ್ನೂ ಗೆದ್ದರಷ್ಟೇ ಮುಂದಿನ ಹಂತಕ್ಕೇ ತಲುಪುವ ಅವಕಾವಿದೆ