ಕೋಲ್ಕತಾ: ಸಕ್ರಿಯ ರಾಜಕಾರಣಕ್ಕೆ ಬನ್ನಿ ಎಂಬ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಸವಾಲನ್ನುಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಸ್ವೀಕರಿಸಿದ್ದು ರಾಜಕೀ ಯಕ್ಕೆ ಬರಲು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆಗಸ್ಟ್ನಲ್ಲಿ ನಿವೃತ್ತರಾಗಬೇಕಿದ್ದ ನ್ಯಾಯಾಧೀಶರು ಆಡಳಿತಾರೂಢ ಟಿಎಂಸಿ ಮತ್ತು ಅದರ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಪದೇ ಪದೇ ಕಟು ಪದಗಳನ್ನು ಬಳಸಿ ಟೀಕಿಸುತ್ತಿದ್ದರು.
ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ಪದೇ ಪದೇ ಚಾಟಿ ಬೀಸುತ್ತಿದ್ದರು. ಹೀಗಾಗಿ ಟಿಎಂಸಿ ವಕ್ತಾರರು ಸಕ್ರಿಯ ರಾಜಕೀಯಕ್ಕೆ ಇಳಿಯುವಂತೆ ಅವರಿಗೆ ಸವಾಲು ಹಾಕಿದ್ದರು.
ನಾನು ರಾಜಕೀಯಕ್ಕೆ ಬರುತ್ತೇನೆ. ನಾನು ಯಾವ ಪಕ್ಷದಿಂದ ಆರಂಭಿಸುತ್ತೇನೆ ಎಂದು ಇಂದು ಹೇಳುತ್ತಿಲ್ಲ. ನ್ಯಾಯಾಲಯದಲ್ಲಿ ಇನ್ನೂ ಉಳಿದಿರುವ ಸಣ್ಣ ಕೆಲಸವನ್ನು ನಾನು ಮೊದಲು ಮುಗಿಸಲು ಬಯಸುತ್ತೇನೆ. ಸೋಮವಾರ ಮುಖ್ಯ ನ್ಯಾಯಮೂರ್ತಿಗೆ ಮೌಖಿಕವಾಗಿ ತಿಳಿಸುತ್ತೇನೆ ಮತ್ತು ಮಂಗಳವಾರ ಬೆಳಗ್ಗೆ ನನ್ನ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುತ್ತೇನೆ ಅಭಿಜಿತ್ ಗಂಗೋಪಾಧ್ಯಾಯ ತಿಳಿಸಿದ್ದಾರೆ.