ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹಕಾರ್ಯ ನೆರವೇರಿದ್ದು, ನವ ದಂಪತಿಗೆ ಸಾಕಷ್ಟು ಮಂದಿ ಶುಭಾಶಯ ಕೋರುತ್ತಿದ್ದಾರೆ.
ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅಭಿಷೇಕ್ ಹಾಗೂ ಅವಿವಾ ಗೃಹಸ್ತ್ರಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಮುಂಜಾನೆಯೇ ಹೊಸ ಬಿಎಂಡಬ್ಲು ಕಾರಿನಲ್ಲಿ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದ್ದು, ಒಕ್ಕಲಿಗರ ಸಮುದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿವೆ.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡೇ ಹಾಜರಿತ್ತು. ಖ್ಯಾತ ನಟಿ ಸುಹಾಸಿನಿ, ಟಾಲಿವುಡ್ ನಟ ಮೋಹನ್ ಬಾಬು, ಮನೋಜ್ ಮಂಚು ಮೊದಲಾದವರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.
ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ. ಬಳಿಕ ಮಂಡ್ಯದಲ್ಲಿ ಅದ್ದೂರಿಯಾಗಿ ಬೀಗರ ಔತಣ ಕೂಡ ಏರ್ಪಡಿಸಲಾಗಿದೆ.