ಬೆಂಗಳೂರು: ನಾಳೆ ರೆಬಲ್ ಸ್ಟಾರ್ ಅಂಬರೀಶ್ (Ambarish) ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ (Abhishek) ಅಂಬರೀಶ್ ಅವರ ಮದುವೆಯ ಬೀಗರ ಔತಣಕೂಟ ಮಂಡ್ಯದಲ್ಲಿ ಜರುಗಲಿದೆ. ಮಂಡ್ಯ ಜನರಿಗೆ ಬೊಂಬಾಟ್ ಬಾಡೂಟ ಹಾಕಿಸಲು ಅಂಬಿ ಕುಟುಂಬ ಭರ್ಜರಿ ತಯಾರಿ ಮಾಡಿಕೊಂಡಿದೆ.
ಮಂಡ್ಯ (Mandya) ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ ನಡೆಯಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರ ಜನರು ಆಗಮಿಸಿವ ನಿರೀಕ್ಷೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha) ಕುಟುಂಬಸ್ಥರು ಇದ್ದಾರೆ. ಹೀಗಾಗಿ ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ,
ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ಇಂದು ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.
ಅಭಿಷೇಕ್ ಮತ್ತು ಅವಿವಾ ಬೀಗರ ಊಟಕ್ಕೆ ರಾಜಕೀಯ ಗಣ್ಯಾತಿ ಗಣ್ಯರು ಸೇರಿದಂತೆ ಸಿನಿಮಾ ಕ್ಷೇತ್ರದ ಗಣ್ಯವ್ಯಕ್ತಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.