ಹೊಸದಿಲ್ಲಿ: ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಸುಮಾರು ಮೂರು ದಶಕಗಳಷ್ಟು ಹಿಂದಿನ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿದ ಕರ್ನಾಟಕದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ವಿವಾದಾತ್ಮಕ ನಿರ್ಧಾರ ಕೋರ್ಟ್ ಮೆಟ್ಟಿಲೇರಿದೆ. ಈ ನಿರ್ಧಾರ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಇದೇ ವಿಚಾರವನ್ನು ಬೇರೆ ನ್ಯಾಯಪೀಠದ ಮುಂದೆಯೂ ಪ್ರಸ್ತಾಪಿಸಲಾಗಿತ್ತು. ಆದರೆ ಪೀಠವು ಅದನ್ನು ವಿಚಾರಣೆಗೆ ಸ್ವೀಕರಿಸಿರಲಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು. ಅರ್ಜಿಯಲ್ಲಿನ ಎಲ್ಲ ದೋಷಗಳನ್ನು ಇನ್ನೂ ಸರಿಪಡಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಕಾರಣ ತಿಳಿಸಿದರು. ಆದರೆ ಸಿಬಲ್ ಅವರು ದೋಷಗಳನ್ನು ಸರಿಪಡಿಸಲಾಗಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು. ಬಳಿಕ ಸಿಜೆಐ ಚಂದ್ರಚೂಡ್ ಅವರು ‘ನಾವು ಅದನ್ನು ಲಿಸ್ಟ್ ಮಾಡಲಿದ್ದೇವೆ’ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕರ್ನಾಟಕದಲ್ಲಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಒಬಿಸಿ ವರ್ಗದಿಂದ ಮುಸ್ಲಿಮರನ್ನು ಹೊರಗಿಡಲು ನಿರ್ಧರಿಸಿತ್ತು. 2ಬಿ ಕೆಟಗರಿ ಅಡಿ ಅವರಿಗೆ ನೀಡಲಾಗಿದ್ದ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಈ ಮೀಸಲಾತಿಯನ್ನು ವೀರಶೈವ- ಲಿಂಗಾಯತ ಮತ್ತು ಒಕ್ಕಲಿಗ ಸಮುದಾಗಳ ನಡುವೆ ತಲಾ ಶೇ 2ರಂತೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿತ್ತು.
ಎಸ್ಸಿಗಳಿಗೆ ಒಳಮೀಸಲಾತಿ
ಜತೆಗೆ, ಪರಿಶಿಷ್ಟ ಜಾತಿಗಳಿಗೆ (ಎಸ್ಸಿ) ಒಳ ಮೀಸಲಾತಿಯನ್ನೂ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ. 2ಬಿ ವರ್ಗದ ಅಡಿ ಬರುವ ಮುಸ್ಲಿಮರನ್ನು ಶೇ 10ರ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಕೋಟಾಕ್ಕೆ ವರ್ಗಾಯಿಸುವುದಾಗಿ ಘೋಷಿಸಿತ್ತು.
ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿದ ನಿರ್ಧಾರದ ವಿರುದ್ಧ ಮುಸ್ಲಿಂ ಮುಖಂಡರು, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.