ಇಂದೋರ್: ಬಾವಿಯ ಮೇಲ್ಛಾವಣಿ ಕುಸಿದು 25 ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದಿದ್ದು ಘಟನೆಯಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ನ ಪಟೇಲ್ ನಗರದಲ್ಲಿರುವ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ನಡೆದಿದೆ.
ರಾಮನವಮಿಯಂದು ದೇವಸ್ಥಾನದಲ್ಲಿ ಭಕ್ತರ ದಂಡೇ ನೆರೆದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವರದಿಯ ಪ್ರಕಾರ, ರಾಮ ನವಮಿಯಂದು ಪಟೇಲ್ ನಗರದ ದೇವಸ್ಥಾನದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಇಂದೋರ್ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ವಿಚಾರಣೆ ನಡೆಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ವಿಡಿಯೊದಲ್ಲಿ ಪೊಲೀಸರು ಹಗ್ಗಗಳನ್ನು ಬಳಸಿ ಜನರನ್ನು ಹೊರಗೆಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಇದುವರೆಗೆ ಐವರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲ ಜನರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಘಾತದ ನಂತರ ದೇವಾಲಯವನ್ನು ತೆರವು ಮಾಡಲಾಗಿದ್ದು, ಜನರು ದೇವಾಲಯದ ಆವರಣಕ್ಕೆ ಪ್ರವೇಶಿಸದಂತೆ ಸ್ಥಳದಲ್ಲಿ ಪೊಲೀಸ್ ತಂಡವನ್ನು ಸಹ ನಿಯೋಜಿಸಲಾಗಿದೆ. ರಕ್ಷಿಸಲ್ಪಟ್ಟವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಇಂದೋರ್ ಜಿಲ್ಲಾಧಿಕಾರಿ ಮತ್ತು ಇಂದೋರ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. “ಸಿಎಂಒ ಇಂದೋರ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದೋರ್ ಪೊಲೀಸ್ ಮತ್ತು ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಭಕ್ತರನ್ನು ಸ್ಥಳಾಂತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೆಲವರನ್ನು ರಕ್ಷಿಸಲಾಗಿದೆ” ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ನರೋತಮ್ ಮಿಶ್ರಾ, ದುರ್ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 11 ಮೃತದೇಹಗಳನ್ನು (10 ಮಹಿಳೆ ಮತ್ತು ಒಬ್ಬ ಪುರುಷ) ಸ್ಥಳದಿಂದ ಹೊರತೆಗೆಯಲಾಗಿದ್ದು, 19 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಇಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.