ತಮಿಳು ಸಿನಿಮಾ ಸೆಟ್ನಲ್ಲಿ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಭಾರಿ ಅವಘಡ ಸಂಭವಿಸಿದೆ.. ತಮಿಳು ನಟ ಕಾರ್ತಿ ಮತ್ತು ಪಿಎಸ್ ಮಿತ್ರನ್ ಕಾಂಬಿನೇಷನ್ ನ ಸರ್ದಾರ್ 2 ಚಿತ್ರೀಕರಣದ ವೇಳೆ ಆಕ್ಷನ್ ದೃಶ್ಯ ಚಿತ್ರೀಕರಿಸಲು ಹೋಗಿ ಸ್ಟಂಟ್ ಮ್ಯಾನ್ ಸಾವನ್ನಪ್ಪಿದ್ದಾರೆ.
ಅದ್ಭುತ ಆ್ಯಕ್ಷನ್ ದೃಶ್ಯವನ್ನು ಈ ಸಿನಿಮಾ ಒಳಗೊಂಡಿದೆ. ಇದರ ಚಿತ್ರೀಕರಣದ ವೇಳೆ ಇಜುಮುಲೈ ಎಂಬ ಸ್ಟಂಟ್ಮ್ಯಾನ್ 20 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ. ಸ್ಟಂಟ್ಮ್ಯಾನ್ ಸಾವಿನ ನಂತರ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ ಸರ್ದಾರ್ 2 ಚಿತ್ರದ ಸಾಹಸ ದೃಶ್ಯಗಳನ್ನು ಚೆನ್ನೈನ ಸಾಲಿಗ್ರಾಮದಲ್ಲಿರುವ ಯೆಚೆ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಶೂಟಿಂಗ್ ವೇಳೆ ಸ್ಟಂಟ್ ಮ್ಯಾನ್ ಇಜುಮುಲೈ 20 ಅಡಿ ಎತ್ತರದಿಂದ ಬಿದ್ದಿದ್ದಾನೆ. ಬಹಳ ಎತ್ತರದಿಂದ ಬಿದ್ದ ಹಿನ್ನೆಲೆ ಸ್ಟಂಟ್ ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದ್ರು. ಸೆಟ್ನಲ್ಲಿ ಏನೆಲ್ಲಾ ನಡೆದಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜುಲೈ 15 ರಿಂದ ಸರ್ದಾರ್ 2 ಚಿತ್ರೀಕರಣ ಪ್ರಾರಂಭವಾಯಿತು. ಶೂಟಿಂಗ್ ಶುರುವಾದ ಎರಡೇ ದಿನಗಳಲ್ಲಿ ಸೆಟ್ನಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ. ಹೀಗಾಗಿ ಎಲ್ಲರೂ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಚಿತ್ರದ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ಚಿತ್ರದಲ್ಲಿ ಕಾರ್ತಿ, ಶಿವಕುಮಾರ್, ಪಿ.ಎಸ್.ಮಿತ್ರನ್ ಮುಂತಾದವರು ನಟಿಸುತ್ತಿದ್ದಾರೆ.
ಅವಘಡ ಸಂಭವಿಸಿದ ತಕ್ಷಣ ಎಜುಮ್ಮಲೈ ಅವರನ್ನು ಸಮೀಪದ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸ್ಟಂಟ್ ಮಾಸ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಕೆ ನಗರ ಇಎಸ್ಐ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.