ಬೆಂಗಳೂರು: ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಬಿಟ್ ಕಾಯಿನ್ ಪ್ರಕರಣದಆರೋಪಿ ಶ್ರೀಕಿಗೆ (Sriki) ಈಗ ಗನ್ ಮ್ಯಾನ್ (Gunman) ನೀಡಲಾಗಿದೆ.
ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ದಳ (SIT) ರಚನೆ ಮಾಡಿತ್ತು. ಎಸ್ಐಟಿ ಮುಂದೆ ಸ್ಫೋಟಕ ಮಾಹಿತಿ ನೀಡಿದ್ದ ಶ್ರೀಕಿಗೆ ಈಗ ಕೊಲೆ ಬೆದರಿಕೆ ಇದೆ. ಅಷ್ಟೇ ಅಲ್ಲದೇ ಶ್ರೀಕಿ ಪೊಲೀಸರ ಕೈಯಲ್ಲಿ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಾಗಿ ಎಸ್ಐಟಿ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ.
ವಿಧಾನಸಭಾ ಚುನಾವಣೆಯಲ್ಲಿಬಿಟ್ ಕಾಯಿನ್ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಶ್ರೀಕಿಯನ್ನು ಬಳಸಿಕೊಂಡು ರಾಜಕಾರಣಿಗಳು ಬಿಟ್ಕಾಯಿನ್ ಹಗರಣಗಳನ್ನು ಎಸಗಿದ ಆರೋಪವಿದೆ. ವಿವಿಧ ಸೈಬರ್ ಕ್ರೈಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ನಾಲ್ವರು ಇತರರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಅಧಿಕಾರಕ್ಕೆ ಬಂದ ಕಾಂಗ್ರೆಸ್ (Congress) ಸರ್ಕಾರ ಈ ಪ್ರಕರಣದ ಮರು ತನಿಖೆಗೆ ಎಸ್ಐಟಿ ರಚನೆ ಮಾಡಿತ್ತು.