ಬೆಂಗಳೂರು: ಮನೆಗಳ್ಳತನ, ಸರಗಳ್ಳತನ ಸೇರಿದಂತೆ 23 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 11 ಆರೋಪಿಗಳನ್ನು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಹಲಸೂರು ಗೇಟ್ ಮತ್ತು ಅಶೋಕನಗರ ಠಾಣೆಗಳ ತಲಾ 8 ಪ್ರಕರಣ, ವಿವೇಕನಗರ, ಸಂಪಂಗಿ ರಾಮನಗರ, ಎಸ್.ಜೆ. ಪಾರ್ಕ್, ವಿಲ್ಸನ್ ಗಾರ್ಡನ್ ಠಾಣೆಗಳ ತಲಾ ಒಂದೊಂದು ಪ್ರಕರಣ, ಶೇಷಾದ್ರಿಪುರಂ ಠಾಣೆಯ ಮೂರು ಪ್ರಕರಣಗಳಿಗೆ ಸಂಬಂಧಿಸಿದ 4.33 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನದ ಆರೋಪಿಗಳು ಹಾಗೂ ಅವರು ನೀಡುತ್ತಿದ್ದ ಆಭರಣಗಳನ್ನು ಸ್ವೀಕರಿಸುತ್ತಿದ್ದವರ ಸಹಿತ 23 ಜನರನ್ನ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಜಾನ್ ಶಂಕರ್ ಎಂಬಾತನನ್ನ ಬಂಧಿಸಿ 223 ಗ್ರಾಂ ಚಿನ್ನಾಭರಣ, 232.44 ಬೆಳ್ಳಿ ಆಭರಣ ಹಾಗೂ 10 ಸಾವಿರ ರೂ ಮೌಲ್ಯದ ಹವಳ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ವಿವೇಕನಗರ ವ್ಯಾಪ್ತಿಯಲ್ಲಿ ಶ್ರೀನಿವಾಸ್, ಹಾಗೂ ಕದ್ದ ಆಭರಣ ಸ್ವೀಕರಿಸುತ್ತಿದ್ದ ಭವರ್ ಲಾಲ್ ಎಂಬುವರನ್ನು ಬಂಧಿಸಿ 301 ಗ್ರಾಂ ಚಿನ್ನಾಭರಣ,
378 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, ಅಡವಿಡಲಾಗಿದ್ದ 60.4 ಗ್ರಾಂ ಚಿನ್ನ ಮತ್ತು 378 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲಸೂರು ಗೇಟ್ ವ್ಯಾಪ್ತಿಯಲ್ಲಿ ಯಾಸೀನ್ ಖಾನ್ ಹಾಗೂ ನೂರುಲ್ಲಾ ಮುಲ್ಲಾ, ಅಹಮ್ಮದ್ ಸಲ್ಮಾನ್ ಎಂಬುವರನ್ನು ಬಂಧಿಸಿ 1 ಕೆ.ಜಿ 522 ಗ್ರಾಂ ಚಿನ್ನದ ಒಡವೆ ಮತ್ತು ಚಿನ್ನದ ಗಟ್ಟಿ, ನಾಲ್ಕು ವಾಚ್ಗಳು, 100 ಗ್ರಾಂ ಬೆಳ್ಳಿ ಆಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ. ಎಸ್.ಜೆ. ಪಾರ್ಕ್ ವ್ಯಾಪ್ತಿಯ ನಿಕುಂಜ್ ಕುಮಾರ್ ಬಾಸ್ಟಲ್ ಎಂಬಾತನನ್ನು ಬಂಧಿಸಿ 6 ಕೆ.ಜಿ. 500 ಗ್ರಾಂ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.