ಬೆಂಗಳೂರು: ಸುಳ್ಳು ಕೇಸ್ ದಾಖಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಹಿಂದೆ ಇದೇ ಠಾಣೆಯ ಹಾಗೂ ಹಾಲಿ ದೇವನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ.
2022ರಲ್ಲಿ ಅಮಾಯಕ ವೈದ್ಯರನ್ನ ಕರೆತಂದು ಡ್ರಗ್ಸ್ ಕೇಸ್ನಡಿ ಅಂದಿನ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಅವರು ಎಫ್ಐಆರ್ ದಾಖಲಿಸಿದ್ದರು.
ವರ್ಗಾವಣೆ ಬಳಿಕ ಬಂದ ಮಂಜುನಾಥ್ ವೈದ್ಯರ ಮೇಲೆ ಚಾರ್ಜ್ ಶೀಟ್ ಹಾಕಿದ್ದರು. ಇಬ್ಬರು ಕಾನೂನು ಉಲ್ಲಂಘನೆ ಮಾಡಿ ಅಮಾಯಕ ಡಾಕ್ಟರ್ ಸಿಲುಕಿಸಿದ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ವರದಿ ನೀಡಿದ್ದರು. ಡಿಸಿಪಿ ವರದಿ ಆಧಾರದ ಮೇಲೆ ಇಬ್ಬರನ್ನೂ ಕಮೀಷನರ್ ಬಿ ದಯಾನಂದ್ ಸಸ್ಪೆಂಡ್ ಮಾಡಿದ್ದಾರೆ.