ಬೆಂಗಳೂರು:– ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಲಾಗಿದ್ದು, ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಎಸ್ಕೇಪ್ ಆಗಿದ್ದಾರೆ. ಸದ್ಯ ಸಿಸಿಬಿ ತಂಡದಿಂದ ಇನ್ಸ್ಪೆಕ್ಟರ್ ಶಂಕರ್ ನಾಯ್ಕ್ಗಾಗಿ ತೀವ್ರ ಶೋಧ ನಡೆಯುತ್ತಿದೆ.ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಇನ್ಸ್ಪೆಕ್ಟರ್ ಶಂಕರ್ ನಾಯ್ಕ್ ಪರಾರಿಯಾಗಿದ್ದಾರೆ.
ಹೈಕೋರ್ಟ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ತಡೆಯಾಜ್ಞೆ ತೆರವು ಹಿನ್ನೆಲೆ ಇನ್ಸ್ಪೆಕ್ಟರ್ ಶಂಕರ್ ನಾಯ್ಕ್ಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆದರೆ ಬಂಧನ ಭೀತಿಯಿಂದ ಶಂಕರ್ ನಾಯ್ಕ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಇನ್ಸ್ಪೆಕ್ಟರ್ ಶಂಕರ್ ನಾಯ್ಕ್ ಅವರು ಕಳ್ಳತನ ಪ್ರಕರಣದಲ್ಲಿ ಉದ್ಯಮಿ ಹರೀಶ್ ಎಂಬುವರ ಕಾರು ಚಾಲಕ ಸಂತೋಷ್ನನ್ನು ಬಂಧಿಸಿ ₹72 ಲಕ್ಷವನ್ನು ಜಪ್ತಿ ಮಾಡಿದ್ದರು. ಆದರೆ ಈ ಹಣವನ್ನು ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಣ ಸಂಬಂಧ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿದ ಬಳಿಕ ಚೀಲದಲ್ಲಿ ಹಣವನ್ನು ತುಂಬಿ ಠಾಣೆಗೆ ತಂದಿಟ್ಟು ಶಂಕರ್ ನಾಯ್ಕ್ ತೆರಳಿದ್ದರು.
ಕೊನೆಗೆ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ ಎಫ್ಐಆರ್ ದಾಖಲಾಯಿತು. 2023ರ ನವೆಂಬರ್ ನಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಸಿಬಿ ಪೊಲೀಸರು, ಮಧ್ಯವರ್ತಿ ಲೋಕನಾಥ್ ಸಿಂಗ್ನನ್ನು ಬುಧವಾರ ರಾತ್ರಿ ಬಂಧಿಸಿದ್ದರು. ಬಳಿಕ ಪ್ರಕರಣ ರದ್ದು ಕೋರಿ ಶಂಕರ್ ನಾಯ್ಕ್ ಹೈಕೋರ್ಟ್ ಮೆಟ್ಟಲೇರಿದ್ದರು.ಆಗ ಹೈಕೋರ್ಟ್ ಪ್ರಕರಣದ ತನಿಖೆಗೆ ತಡೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಹೈಕೋರ್ಟ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ.
ತಡೆಯಾಜ್ಞೆ ತೆರವು ಆಗುತ್ತಿದ್ದಂತೆ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಎಸ್ಕೇಪ್ ಆಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.