ನವದೆಹಲಿ:- ವಿವಿಧ ಹಗರಣಗಳ ದಾಖಲೆಗಳ ಕಳವು ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ FIR ದಾಖಲಾಗಿದೆ. ದೆಹಲಿ ಮುಖ್ಯ ಕಾರ್ಯದರ್ಶಿ (Delhi Chief Secretary) ನರೇಶ್ ಕುಮಾರ್ ಮತ್ತು ಸಹಾಯಕ ಅಧಿಕಾರಿ ವೈವಿವಿಜೆ ರಾಜಶೇಖರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಉತ್ತರಾಖಂಡದ ಅಲ್ಮೋರಾ ಪಟ್ಟಣದ ನ್ಯಾಯಾಲಯದ ಆದೇಶದ ಮೇರೆಗೆ FIR ದಾಖಲಾಗಿದೆ.
ಇದೇ ಮಾರ್ಚ್ 2ರಂದು ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ಎನ್ಜಿಒ ಸಂಸ್ಥೆ ನೀಡಿದ್ದ ದೂರನ್ನು ಸ್ವೀಕರಿಸಿತ್ತು. ಕೋರ್ಟ್ ದೆಹಲಿ ಸರ್ಕಾರದ ಕಾರ್ಯದರ್ಶಿಗಳ ವಿರುದ್ಧ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಕಂದಾಯ ಪೊಲೀಸರಿಗೆ ಸೂಚಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 392 (ದರೋಡೆ), 447 (ಕ್ರಿಮಿನಲ್ ಅತಿಕ್ರಮಣ), 120-ಬಿ (ಕ್ರಿಮಿನಲ್ ಪಿತೂರಿ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಎಸ್ಸಿ-ಎಸ್ಟಿ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ಫೆಬ್ರವರಿ 14 ರಂದು ದಡಕಡ ಗ್ರಾಮದಲ್ಲಿ ಎನ್ಜಿಒ ನಡೆಸುತ್ತಿರುವ ಶಾಲೆಗೆ ಅಧಿಕಾರಿಗಳು ನಾಲ್ವರನ್ನು ಕಳುಹಿಸಿದ್ದರು. ಕಾರ್ಯದರ್ಶಿಕಡೆಯವರು ಎಂದು ಹೇಳಿಕೊಂಡ ನಾಲ್ವರು ಎನ್ಜಿಒ ಜಂಟಿ ಕಾರ್ಯದರ್ಶಿ ಕಚೇರಿ ಕೊಠಡಿಯನ್ನು ಧ್ವಂಸಗೊಳಿಸಿದರು. ಜೊತೆಗೆ ಅವರು ಪಾಲುದಾರರಾಗಿದ್ದ ಹಗರಣಗಳ ಸಾಕ್ಷ್ಯಾಧಾರಗಳಿರುವ ಕಡತಗಳು, ದಾಖಲೆಗಳು ಮತ್ತು ಪೆನ್ ಡ್ರೈವ್ಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಎನ್ಜಿಒ ಅಧಿಕಾರಿಗಳು ತಮ್ಮ ವಿರುದ್ಧ ವಿಜಿಲೆನ್ಸ್ ಇಲಾಖೆ (Vigilance department) ಮತ್ತು ಇತರ ವೇದಿಕೆಗಳಲ್ಲಿ ಸಲ್ಲಿಸಿರುವ ಭ್ರಷ್ಟಾಚಾರದ ದೂರುಗಳನ್ನು ತಕ್ಷಣವೇ ಹಿಂಪಡೆಯದೇ ಇದ್ದರೆ ಅವರನ್ನ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆಂದೂ ದೂರುದಾರರು ತಿಳಿಸಿದ್ದಾರೆ.
ಈ ವೇಳೆ ಅವರು ತಂದಿದ್ದ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು, ಅದನ್ನ ವಿರೋಧಿಸಿದಾಗ ದುಷ್ಕರ್ಮಿಗಳು ಕಚೇರಿಯ ಡ್ರಾಯರ್ನಲ್ಲಿಟ್ಟಿದ್ದ 63,000 ರೂ. ನಗದನ್ನೂ ದೋಚಿಕೊಂಡು ಹೋಗಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ