ಮಂಡ್ಯದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿತ್ತು. ಆ ವೇಳೆ ಬೇವಿನಹಳ್ಳಿ ಗ್ರಾಮದ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲಾವಿದರಿಗೆ 500 ರೂ ಮುಖಬೆಲೆಯ ಗರಿ ಗರಿ ನೋಟು ಎಸೆದ ಪ್ರಸಂಗ ಕೂಡ ನಡೆದಿತ್ತು. ಇದೀಗ ಆ ಸಂಬಂಧ ಡಿ.ಕೆ.ಶಿವಕುಮಾರ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಧ್ಯಮಗಳಲ್ಲಿ ಆ ಕುರಿತು ಸುದ್ದಿ ಪ್ರಸಾರವಾದ ಬೆನ್ನಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚುನಾವಣಾ ಅಧಿಕಾರಿ ಅಶೋಕ್ ಎಂಬುವವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಣ ಎರಚಿರುವುದು ಮಾಧ್ಯಮಗಳಿಂದ ತಿಳಿದುಬಂದಿದ್ದು, ಈ ಸಂಬಂಧ ಆರ್.ಸಿ ಆಕ್ಟ್ ಅಡಿ ಡಿಕೆಶಿ ವಿರುದ್ದ ಕ್ರಮಕೈಗೊಳ್ಳುವಂತೆ ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.