ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ ಧಿಮಾಕಿನ ವರ್ತನೆ ತೋರಿದ್ದಾರೆ ಎನ್ನಲಾಗುತ್ತಿದೆ.
ಮನೆಯಲ್ಲಿದ್ದಾಗ ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಈಗ ಕಸ್ಟಡಿಯಲ್ಲಿ ಅದೇ ರೀತಿಯ ಊಟ, ಉಪಚಾರ ಬೇಕು ಎಂದುಕೊಳ್ಳುತ್ತಿದ್ದಾರೆ. ತನಗೆ ನೀಡಿರುವ ಊಟದ ಬಗ್ಗೆ ಪವಿತ್ರಾ ಚಕರಾರು ತೆಗೆದಿದ್ದಾರೆ.
ಶುಕ್ರವಾರ ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ ನೀಡಲಾಗಿತ್ತು. ಎರಡು ತುತ್ತು ಸೇವಿಸಿದ ಪವಿತ್ರಾ ತಾನು ಪೊಲೀಸ್ ಕಸ್ಟಡಿಯಲ್ಲಿ ನಾನು ಇದ್ದೇನೆ ಎನ್ನುವುದನ್ನೇ ಮರೆತು ಇದು ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು ಎಂದು ಅಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಪ್ರಶ್ನಿಸಿದ್ದಾರೆ.
ಪವಿತ್ರಾ ಪ್ರಶ್ನೆಗೆ, ನಾನು ಊಟ ಮಾಡ್ತಿರೋದು ಕೂಡ ಅದೇ ಮೊಸರನ್ನ. ಬೇಕಾದ್ರೆ ಊಟ ಮಾಡು. ಇಷ್ಟ ಇಲ್ಲದೇ ಇದ್ರೆ ಬಿಟ್ಟು ಬಿಡು ಎಂದು ಅಷ್ಟೇ ಖಡಕ್ ಆಗಿ ಉತ್ತರ ನೀಡಿದ್ದಾರೆ. ಈ ಉತ್ತರಕ್ಕೆ ಪೆಚ್ಚಾದ ಪವಿತ್ರಾ ಗೌಡ ಕೊನೆಗೆ ಮೊಸರನ್ನ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಸದ್ಯ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 18 ಮಂದಿ ಆರೋಪಿಗಳನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.