ಬೆಂಗಳೂರು: ಶಿವರಾಮಕಾರಂತ ಬಡಾವಣೆಗಾಗಿ ವಕ್ಫ್ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಹಿನ್ನೆಲೆ ಭೂ ಪರಿಹಾರ ಅಥವಾ ಪರ್ಯಾಯ ಜಮೀನು ನೀಡಲು ಶಾಫಿ ಸಅದಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡಗೆ ಪತ್ರ ಬರೆದಿರುವ ಅವರು, ಭೂ ಸ್ವಾಧೀನಾಧಿಕಾರಿಗಳು ಸಂಪೂರ್ಣ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಕ್ಫ್ ಸಂಸ್ಥೆಯಾದ ನಗರದ ಕಬ್ಬನ್ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಮತ್ತು ಹಝ್ರತ್ ಮುಹೀಬ್ ಷಾ ಖಾದ್ರಿ ದರ್ಗಾ ಮತ್ತು ರಾಜ್ಯ ವಕ್ಫ್ ಮಂಡಳಿಯೊಂದಿಗೆ ಸಮಾಲೋಚಿಸದೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೇಡಿ ಅಗ್ರಹಾರ ಗ್ರಾಮದ ಸಂಪೂರ್ಣ ವಿಸ್ತೀರ್ಣ 358 ಎಕರೆ 11 ಗುಂಟೆ ಜಮೀನು ಹಝ್ರತ್ ಹಮೀದ್ ಶಾ ದರ್ಗಾಗೆ ಸೇರಿದ ಮುಸ್ಲಿಂ ಮುಜುರಾಯಿ ದೇವಾಲಯದ ಇನಾಂತಿ ಜಮೀನಾಗಿದೆ. 1973ರಲ್ಲಿ ರಾಜ್ಯ ಸರಕಾರದ ಆದೇಶದಂತೆ ಮುಸ್ಲಿಂ ಮುಜುರಾಯಿ ಸ್ವತ್ತುಗಳನ್ನು ರಾಜ್ಯ ವಕ್ಫ್ ಮಂಡಳಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ ಎಂದು ಶಾಫಿ ಸಅದಿ ಹೇಳಿದ್ದಾರೆ.
ಈ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರು ರಾಜ್ಯದ ಎಂಡೋಮೆಂಟ್ಸ್ ಆಯುಕ್ತರಿಗೆ 1974ರಲ್ಲಿ ಪತ್ರ ಬರೆದು ರಾಜ್ಯದ 456 ವಕ್ಫ್ ಸಂಸ್ಥೆಗಳ ಚರ, ಸ್ಥಿರ ಆಸ್ತಿಗಳು ಹಾಗೂ ಆಭರಣ ಇತ್ಯಾದಿಗಳ ಸಮೇತ ರಾಜ್ಯ ವಕ್ಫ್ ಮಂಡಳಿಗೆ ಹಸ್ತಾಂತರಿಸಲು ಸೂಚಿಸಿದ್ದಾರೆ ಅವರು ತಿಳಿಸಿದ್ದಾರೆ.