ಬೆಂಗಳೂರು ;– ಶಿವಮೊಗ್ಗ ಏರ್ಪೋರ್ಟ್ ವೆಚ್ಚದಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ರನ್ ವೇ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ಹೆಚ್ಚಿಸುವಲ್ಲಿ ಅವ್ಯವಹಾರವಾಗಿದ್ದಲ್ಲಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಲ್ದಾಣದ ಆರಂಭಿಕ ಅಂದಾಜು ಮೊತ್ತ 220 ಕೋಟಿ ರು.ಗಳಾಗಿದ್ದು, ಎರಡು ಬಾರಿ ಅಂದಾಜು ಮೊತ್ತ ಪರಿಷ್ಕರಿಸಲಾಗಿದೆ. ಪ್ರಸ್ತುತ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 449.22 ಕೋಟಿ ರು.ಗಳಾಗಿದೆ ಎಂದರು.
ಮೊದಲು ರನ್ ವೇ ನಿರ್ಮಾಣ ಕಾಮಗಾರಿಯನ್ನು ಎಟಿಆರ್-72 ಮಾದರಿ ವಿಮಾನಗಳ ಹಾರಾಟಕ್ಕೆ ಅನುವಾಗುವ ರೀತಿಯಲ್ಲಿ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಈ ಕಾಮಗಾರಿ ಪ್ರಗತಿಯಲ್ಲಿರುವಾಗ ಎಟಿಆರ್-72 ಬದಲಾಗಿ ಏರ್ಬಸ್-320 ಮಾದರಿ ಅನುವಾಗುವಂತೆ ನಿರ್ಮಿಸಲು ನಿರ್ಧರಿಸಿದ ಕಾರಣ ಅಂದಾಜು ವೆಚ್ಚ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.