ಬಳ್ಳಾರಿ: ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಮುಷ್ಕರ ಮಾಡುವುದಿಲ್ಲ. ಸಾರಿಗೆ ಸಿಬ್ಬಂದಿ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಅವರ ವೇತನ ಪರಿಷ್ಕರಣೆ ಬಗ್ಗೆ ಬುಧವಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಾರ್ಚ್ 21ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟಿರುವ ವಿಚಾರಕ್ಕೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಅವರು, ವೇತನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅವರನ್ನು ಕರೆದು ಮಾತನಾಡಿದ್ದೇನೆ. ಹಣಕಾಸಿನ ಇತಿಮಿತಿಯಲ್ಲಿ ಒಂದಷ್ಟು ವೇತನ ಹೆಚ್ಚಳ ಮಾಡ್ತೇನೆ ಎಂದು ಭರವಸೆ ನೀಡಿದ್ದೆ. ಆದರೆ, ಅದಕ್ಕೆ ಅವರು ಒಪ್ಪಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡಿ ಬುಧವಾರ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸಾರಿಗೆ ನೌಕರರ ಫೆಡರೇಶನ್ ಅವರ ಜೊತೆ ಮಾತನಾಡಲು ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಅವರಿಗೆ ಈಗಾಗಲೇ ಸೂಚಿಸಿದ್ದೇನೆ. ಸಾರಿಗೆ ನೌಕರರನ್ನು ಮನವೊಲಿಸಲು ಸೂಚನೆ ನೀಡಿದ್ದೇನೆ. ಸಾರಿಗೆ ಸಿಬ್ಬಂದಿಯ ವೇತನವನ್ನು ಪರಿಷ್ಕರಣೆ ಮಾಡೋದು ನಿಜ. ಆದರೆ, ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಸ್ಪಲ್ಪ ಹೆಚ್ಚಳ ಮಾಡ್ತೇವೆ ಎಂದು ಹೇಳಿದರು.
ಶ್ರೀರಾಮುಲು ಮಾತುಕೊಟ್ಟರೇ ಉಳಿಸಿಕೊಳ್ತಾರೆ, ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ್ದೇವೆ. ಅದೇ ರೀತಿ ಸಾರಿಗೆ ನೌಕರರ ವೇತನವನ್ನು ಪರಿಷ್ಕರಣೆ ಮಾಡ್ತೀವಿ. ಮುಷ್ಕರ ಹೋಗೋ ಪರಿಸ್ಥಿತಿ ಬರಲ್ಲ. ಸಾರಿಗೆ ನೌಕರರ ಮುಷ್ಕರದ ಹಿಂದೆ ಯಾರ ಕೈವಾಡವೂ ಇಲ್ಲ. ಸಾರಿಗೆ ನೌಕರರಿಗೆ ತೃಪ್ತಿಯಾಗೋ ರೀತಿ ಕೆಲಸ ಮಾಡ್ತೇವೆ ಎಂದು ಹೇಳಿದ ಅವರು, ನೌಕರರ ಮರು ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಎಂಟಿಸಿಯಲ್ಲಿ ಕ್ರಿಮಿನಲ್ ಹಿನ್ನೆಲೆ ಇದ್ದವರು ಮಾತ್ರ ಕೆಲವರು ಉಳಿದಿದ್ದಾರೆ. ಅವರನ್ನು ಕೂಡ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.
ಮಾರ್ಚ್ 21ರಿಂದ ಮುಷ್ಕರ ಘೋಷಿಸಿರುವ ನೌಕರರು!
ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 20ರ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಗೊಳ್ಳಲಿದ್ದು, ಯುಗಾದಿಗೆ ಊರಿಗೆ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ನೌಕರರು, ಸಾರಿಗೆ ಸಚಿವ ಶ್ರೀರಾಮುಲು ಮಾರ್ಚ್ 8ರಂದು ಸಭೆ ಕರೆದು ಮೂಲ ವೇತನದ ಶೇ 10ರಷ್ಟು ಹೆಚ್ಚಳದ ಭರವಸೆ ನೀಡಿದ್ದರು. ಆದರೆ, ಸಚಿವರ ಭರವಸೆಗೆ ನಾವು ಸಮ್ಮತಿಸಲಿಲ್ಲ. ಆದ್ದರಿಂದ ಎರಡು ದಿನಗಳೊಳಗೆ ಮತ್ತೊಮ್ಮೆ ಸಭೆ ನಡೆಸಿ, ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಶ್ರೀರಾಮುಲು ಹೇಳಿದ್ದರು. ಆದರೆ, ಇದುವರೆಗೂ ಸಭೆ ಕರೆಯದ ಕಾರಣ ನಾವು ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳೇನು?
ಸಾರಿಗೆ ನೌಕರರ ಬೇಡಿಕೆಗಳನ್ನು ಗಮನಿಸಿದರೆ ಮೂಲ ವೇತನಕ್ಕೆ ಬಿಡಿಎ ವಿಲೀನಗೊಳಿಸಿ, ಮೂಲ ವೇತನವನ್ನು ಶೇ.25ರಷ್ಟು ಹೆಚ್ಚಿಸಬೇಕು ಎಂಬುದು ಮೊದಲ ಬೇಡಿಕೆಯಾಗಿದೆ. ವೇತನ ಹೆಚ್ಚಳವು ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು ಎಂದು ಆಗ್ರಹಿಸಿದ್ದಾರೆ. ಅದರ ಜೊತೆ ಎಲ್ಲ ನೌಕರರಿಗೂ ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು ಎಂದು ಪಟ್ಟನ್ನು ಸಾರಿಗೆ ನೌಕರರು ಹಿಡಿದಿದ್ದಾರೆ.