ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿಯ ವಿಧಾನಸಭೆ (Assembly) ಚುನಾವಣೆಯ ಮತದಾನದ (Voting) ಪ್ರಮಾಣ ಹೆಚ್ಚಳವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಆದರೂ, ಯುವ ಜನಾಂಗ ಮತದಾನ ಕೇಂದ್ರದತ್ತ ಸುಳಿಯದೇ ಇರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಯುವಜನತೆ ಬೂತ್ ನತ್ತ ಮುಖಮಾಡಿಲ್ಲವೆಂದು ಬೆಳಗ್ಗೆಯೇ ನಟಿ ಮೇಘನಾ ರಾಜ್ ಬೇಸರ ವ್ಯಕ್ತಪಡಿಸಿದ್ದರು. ಈ ಮಾತಿನ ಬೆನ್ನಲ್ಲೇ ಹಿರಿಯ ನಟ ಅನಂತ್ ನಾಗ್ (Anant Nag) ಕೂಡ ಇದೇ ಮಾತುಗಳನ್ನು ಆಡಿದ್ದಾರೆ.
ಆರ್.ಎಂ.ವಿ ಸೆಕೆಂಡ್ ಸ್ಟೇಜ್ ನಲ್ಲಿ ಮತದಾನ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ್ ನಾಗ್, ‘ಮತದಾರರು ಮತದಾನ (Election) ಮಾಡುವುದಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಇದು ಸರಿಯಾದದ್ದು ಅಲ್ಲ. ಅದರಲ್ಲೂ ಯುವಕ ಯುವತಿಯರು ಹೆಚ್ಚೆಚ್ಚು ಬರಬೇಕಿತ್ತು. ಅವರೂ ಕಾಣುತ್ತಿಲ್ಲ. ಹಿರಿಯ ನಾಗರೀಕರಿಗೆ ಮನೆಯಲ್ಲೇ ಮತದಾನದ ವ್ಯವಸ್ಥೆ ಮಾಡಿದಂತೆ ಅವರಿಗೆ ಮಾಡಬೇಕಿತ್ತೇನೋ’ ಎಂದು ಬೇಸರ ವ್ಯಕ್ತ ಪಡಿಸಿದರು ಅನಂತ್ ನಾಗ್.
ಮುಂದುವರೆದು ಮಾತನಾಡಿದ ಅನಂತ್ ನಾಗ್, ‘ಬಹುಶಃ ಯುವಕ ಯುವತಿಯರಿಗೆ ಮತದಾನದ ಬೂತ್ ಅನ್ನು ಪಬ್ ಒಳಗೋ, ಬಾರ್ ಒಳಗೋ ಮಾಡಬೇಕಿತ್ತು ಅನಿಸತ್ತೆ. ಪವಿತ್ರಾ ಕಾರ್ಯಕ್ಕೆ ಯಾಕಿಷ್ಟು ಅಸಡ್ಡೆ’ ಎಂದು ಅನಂತ್ ನಾಗ್ ಕಿಡಿಕಾರಿದರು. ಮತದಾನದ ಪ್ರಮಾಣ ಹೆಚ್ಚಾಗಬೇಕು ಎಂದು ಅವರ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.