ಬಾಲಿವುಡ್ ನಟರಾದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಇತ್ತೀಚೆಗೆ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ, ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ಅವಕಾಶ ಇಲ್ಲದೇ ಎದುರಿಸಿದ ಸಂಕಷ್ಟಗಳ ಬಗ್ಗೆ ನಟ ಸನ್ನಿ ವಿವರಿಸಿದ್ದು, ಸಹೋದರನ ಮಾತಿಗೆ ಬಾಬಿ ಡಿಯೋಲ್ ಕಣ್ಣೀರಿಟ್ಟಿದ್ದಾರೆ.
ನಾವು 1960ರ ದಶಕದಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಎಷ್ಟೇ ಪ್ರಯತ್ನಪಟ್ಟರೂ ಕೂಡ ನಮಗೆ ಗೆಲುವು ಸಿಗುತ್ತಿರಲಿಲ್ಲ. ಇತ್ತೀಚೆಗೆ ನನ್ನ ಮಗನ ಮದುವೆ ನಡೆಯಿತು. ಗದರ್ 2 ಚಿತ್ರದ ಸಕ್ಸಸ್ ಕಂಡಿತ್ತು. ಅಪ್ಪನ ಸಿನಿಮಾ ಕೂಡ ಹಿಟ್ ಆಯ್ತು. ಅನಿಮಲ್ ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಕ್ಕಿತ್ತು. ಇಷ್ಟೆಲ್ಲಾ ಹಾರೈಕೆ ಹೇಗೆ ಬಂತೋ ಗೊತ್ತಿಲ್ಲ ಎಂದು ಸನ್ನಿ ಡಿಯೋಲ್ ಮಾತನಾಡುವಾಗ ಬಾಬಿ ಡಿಯೋಲ್ ಕಣ್ಣೀರು ಸುರಿಸಿದ್ದಾರೆ. ಸಹೋದರನ ಮಾತಿಗೆ ಕಪಿಲ್ ಶರ್ಮಾ ಭಾವುಕರಾಗಿದ್ದಾರೆ.
ಸದ್ಯಕ್ಕೆ ಡಿಯೋಲ್ ಕುಟುಂಬಕ್ಕೆ ಒಳ್ಳೆಯ ಕಾಲ ಬಂದಿದೆ. ಸನ್ನಿ ಡಿಯೋಲ್ ನಟಿಸಿದ ‘ಗದರ್ 2’, ಬಾಬಿ ಡಿಯೋಲ್ ನಟಿಸಿದ ‘ಅನಿಮಲ್’, ಧರ್ಮೇಂದ್ರ ಅಭಿನಯಿಸಿದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗಳು 2023ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿವೆ. ‘ಗದರ್ 2’ ಗೆಲುವಿನ ಬಳಿಕ ಸನ್ನಿ ಡಿಯೋಲ್ ಅವರ ಡಿಮ್ಯಾಂಡ್ ಮತ್ತೆ ಹೆಚ್ಚಾಗಿದೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ. ಅದೇ ರೀತಿ, ‘ಅನಿಮಲ್’ ಸಿನಿಮಾ ಗೆದ್ದ ಬಳಿಕ ಬಾಬಿ ಡಿಯೋಲ್ ಅವರಿಗೆ ಆಫರ್ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ಅವಕಾಶ ಪಡೆಯುತ್ತಿದ್ದಾರೆ.